ಬೆಳಗಾವಿ: ಭೀಕರ ಕೊಲೆ ಪ್ರಕರಣವನ್ನು 24 ಗಂಟೆಯಲ್ಲೇ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೈಲಹೊಂಗಲ ತಾಲೂಕಿನ ದೊಡವಾಡದಲ್ಲಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕ್ಷುಲ್ಲಕ ದಾರಿ ವಿವಾದಕ್ಕೆ ಸಂಬಂಧಿಯನ್ನು ಕೊಂದಿದ್ದ ಆರೋಪಿಯನ್ನು ಜೈಲಿಗೆ ಕಳಿಸಲಾಗಿದೆ.
ದೊಡವಾಡ ಗ್ರಾಮದ ಕೊಪ್ಪ ಅಗಸಿಯ ನಿವಾಸಿ ಮಹೇಶ ಬಸಯ್ಯ ಉಪ್ಪನಿಮಠ ಎಂಬುವವರ ಭೀಕರ ಹತ್ಯೆ ಪ್ರಕರಣವನ್ನು ದೊಡವಾಡ ಪೊಲೀಸರು ಕೇವಲ ಒಂದೇ ದಿನದಲ್ಲಿ ಭೇದಿಸಿದ್ದಾರೆ. ಮೃತನ ಸಂಬಂಧಿ ರುದ್ರಯ್ಯ ಬಸಯ್ಯ ಉಪ್ಪನಿಮಠ (36) ಎಂಬಾತ ಕೃತ್ಯ ಎಸಗಿದವ.
ಮನೆಯ ಮುಂದಿನ ದಾರಿ ವಿವಾದ ಹಾಗೂ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ. ಮಾರ್ಚ್ 17 ರಂದು ಸಂಜೆ ಏಕಾಏಕಿ ಕುಡುಗೋಲಿನಿಂದ ಮಹೇಶನ ಕುತ್ತಿಗೆಗೆ ಇರಿದು ರಕ್ತದ ಮಡುವಿನಲ್ಲಿ ಕೆಡವಿದ್ದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ, ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಮೊದಲಿನಿಂದಲೂ ದಾರಿ ವಿಚಾರವಾಗಿ ಮೃತನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಘಟನೆಯ ದಿನ ಚಿಕನ್ ಅಂಗಡಿ ಬಳಿ ನಡೆದ ಗಲಾಟೆಯಲ್ಲಿ ಮೃತ ಮಹೇಶ ಬುದ್ಧಿವಾದ ಹೇಳಿದ್ದಕ್ಕೆ ಕೆರಳಿದ ಆರೋಪಿ, ನನ್ನ ಮೇಲೆಯೇ ಹಿರೇತನ ತೋರಿಸುತ್ತೀಯಾ?’ ಎಂದು ಆಕ್ರೋಶಗೊಂಡು ಹೊಂಚು ಹಾಕಿ ಈ ಕೃತ್ಯ ಎಸಗಿದ್ದಾನೆ.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಗುಡಗನಟ್ಟಿ ಹಾಗೂ ಪಿಎಸ್ಐ ಹೆಚ್.ಕೆ. ಪಾಟೀಲ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಪೊಲೀಸ್ ತಂಡದ ಈ ಶ್ಲಾಘನೀಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


