ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿದ್ದ ಗ್ರಾಮೀಣ ಉತ್ಸವ ಗುರುವಾರ ಮುಕ್ತಾಯವಾಗಿದ್ದು, ಅಂತಿಮ ದಿನ ಸುಳೇಬಾವಿಯಲ್ಲಿ ವಿವಿಧ ಮನೆಗಳ ಎದುರು ಹಾಕಲಾಗಿದ್ದ ರಂಗೋಲಿಗಳು ಗಮನ ಸೆಳೆದವು. ಅದರಲ್ಲೂ ಸುಳೇಬಾವಿ ಮಹಾಲಕ್ಷ್ಮೀ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಚಿತ್ತಾರಗಳು ರಂಗೋಲಿಯಲ್ಲಿ ಮನೋಜ್ಞವಾಗಿ ಮೂಡಿ ಬಂದಿವೆ.
ಗ್ರಾಮೀಣ ಕ್ಷೇತ್ರದಾದ್ಯಂತ ಹರ್ಷ ಶುಗರ್ಸ್ ವತಿಯಿಂದ ಗ್ರಾಮೀಣ ಉತ್ಸವ ಆಯೋಜಿಸಲಾಗಿತ್ತು. ಪ್ರತಿ ಊರಲ್ಲಿ ಮನೆಗಳ ಮುಂದೆ, ನಮ್ಮ ಸಂಸ್ಕೃತಿ ಬಿಂಬಿಸುವ ರಂಗವಲ್ಲಿಗಳನ್ನು ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಇಡೀ ಕ್ಷೇತ್ರದ ಲಕ್ಷಾಂತರ ಜನರು ಈ ಬೃಹತ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ವಿಜೇತರಿಗೆ, ಭಾಗವಹಿಸಿದವರಿಗೆ ವಿಶೇಷ ಬಹುಮಾನಗಳನ್ನು ಸಹ ನೀಡಲಾಯಿತು.
ಅಂತಿಮ ದಿನ ಸುಳೇಬಾವಿಯಲ್ಲಿ ರವಿ ಮೂಲಂಗಿ ಅವರ ಮನೆಯ ಮುಂದೆ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ಚಿತ್ರ ರಂಗೋಲಿಯಲ್ಲಿ ಅರಳಿದೆ. ಸುಳೇಭಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ ಸುಗಣೇನ್ನವರ ಅವರ ಮನೆ ಮುಂದೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಚಿತ್ತಾರ ರಂಗೋಲಿಯಲ್ಲಿ ಮೂಡಿ ಬಂದಿವೆ. ಸ್ವತಃ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಚನ್ನರಾಜ ಹಟ್ಟಿಹೊಳಿ ರಂಗೋಲಿಗಳನ್ನು ನೋಡಿ ಹರ್ಷಪಟ್ಟರು.
ಗ್ರಾಮದ ಬಹುತೇಕ ಎಲ್ಲರ ಮನೆಗಳ ಮುಂದೆ ರಂಗೋಲಿ ಬಿಡಿಸಲಾಗಿದ್ದು, ಎಲ್ಲರ ಮನಸೂರೆಗೊಳ್ಳುತ್ತಿವೆ. ನವಿಲು ಸೇರಿದಂತೆ ವಿವಿಧ ಪಕ್ಷಿಗಳು, ಶ್ರೀ ಕೃಷ್ಣ-ರಾಧೆ, ಕೊಳಲು ವಾದಕ ಸೇರಿದಂತೆ ವಿವಿಧ ದೇವರ ಚಿತ್ರಗಳು, ನಿಸರ್ಗದ ಚಿತ್ರಗಳು ರಂಗೋಲಿಯಲ್ಲಿ ಮೂಡಿಬಂದಿವೆ.
ಒಟ್ಟಾರೆ, 15 ದಿನಗಳ ಈ ಅಭಿಯಾನಕ್ಕೆ ಅಭೂತಪೂರ್ವ ಪ್ರೋತ್ಸಾಹ, ಪ್ರಶಂಸೆ ವ್ಯಕ್ತವಾಗಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾಡುತ್ತಿರುವ ಅಭಿವೃದ್ಧಿಯ ಕಾರ್ಯಗಳ ಜೊತೆಗೆ ನಮ್ಮ ಸಂಸ್ಕೃತಿ ರಕ್ಷಿಸಿ, ಪ್ರೋತ್ಸಾಹಿಸುವ ಈ ಕಾರ್ಯಕ್ಕೂ ಕ್ಷೇತ್ರಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಅವರ ಸಾಮಾಜಿಕ ಕಳಕಳಿಗೆ ಜನ ಜೈ ಎಂದಿದ್ದಾರೆ.