ಜನಜೀವಾಳ ಸರ್ಚ್ ಲೈಟ್, ಬೆಳಗಾವಿ: ಮಾಜಿ ಮುಖ್ಯಮಂತ್ರಿಗಳು, ಬೆಳಗಾವಿ ಸಂಸದರು ಆಗಿರುವ ಜಗದೀಶ ಶೆಟ್ಟರ ಅವರ ಮೇಲೆ ಬೆಳಗಾವಿ ಜನತೆ ವಿಶ್ವಾಸ ಕಳೆದುಕೊಂಡಂತಿದೆ. ಜಗದೀಶ ಶೆಟ್ಟರ ಅವರು ಬೆಳಗಾವಿ ಸಂಸದರಾಗಿ ಆರು ತಿಂಗಳು ಕಳೆದಿದೆ. ಆದರೆ, ಅವರಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳು ಆಗಿಲ್ಲ ಆಗುತ್ತಿಲ್ಲ ಎಂಬ ಭಾವನೆ ಜನರಿಂದ ವ್ಯಕ್ತವಾಗುತ್ತಿದೆ.
ಉದ್ಯೋಗ ಮತ್ತು ಸರಕಾರಿ ಕೆಲಸ ಕಾರ್ಯಗಳ ನಿಮಿತ್ತ ಎರಡನೇ ರಾಜಧಾನಿ ಬೆಳಗಾವಿ ಜಿಲ್ಲೆಯ ಜನತೆ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿದಿನ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಆದರೆ ಅವರಿಗೆ ತ್ವರಿತವಾಗಿ ಸೇವೆ ನೀಡುವಲ್ಲಿ ಆಸರೆ ಆಗಬೇಕಾಗಿದ್ದ ವಂದೇ ಭಾರತ ರೈಲು ಸೇವೆ ಮಾತ್ರ ಗಗನ ಕುಸುಮವಾಗಿದೆ.
ರಾಜಧಾನಿ ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ ಮೂಲಕ ಬೆಳಗಾವಿಗೆ ಸಂಪರ್ಕ ಕಲ್ಪಿಸುತ್ತಿದ್ದ ಅತ್ಯಂತ ಮಹತ್ವಾಕಾಂಕ್ಷಿಯ ವಂದೇ ಭಾರತ ರೈಲು ಸದ್ಯ ಅವಳಿ ನಗರಕ್ಕೆ ಮಾತ್ರ ಸೀಮಿತವಾಗಿದೆ. ಕೆಲ ತಿಂಗಳುಗಳವರೆಗೆ ಬೆಳಗಾವಿಗೆ ಸಂಪರ್ಕ ಕಲ್ಪಿಸಿದ್ದ ಈ ರೈಲನ್ನು ಮತ್ತೆ ಬೆಳಗಾವಿವರೆಗೆ ವಿಸ್ತರಿಸಬೇಕು ಎಂಬ ಬೆಳಗಾವಿ ಜಿಲ್ಲೆಯ ಜನತೆಯ ಕೂಗು ಅರಣ್ಯರೋಧನವಾಗಿದೆ.
ಜಗದೀಶ ಶೆಟ್ಟರ ಅವರು ಈ ಬಗ್ಗೆ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದರೂ ಮಾತ್ರ ಯಾವ ಫಲಶ್ರತಿಯು ಆಗಿಲ್ಲ.
ಹುಬ್ಬಳ್ಳಿಯಿಂದ ಬೆಳಗಾವಿ ಮಾರ್ಗದಲ್ಲೇ ಪುಣೆವರೆಗೆ ವಂದೇ ಭಾರತ ರೈಲು ಸಂಚಾರ ನಡೆಸುತ್ತದೆ. ಆದರೆ, ಅದೇ ಮಾರ್ಗದಲ್ಲಿ ಬರುವ ರೈಲನ್ನು ರಾಜಧಾನಿಯಿಂದ ಉಪರಾಜಧಾನಿಗೆ ವಿಸ್ತರಿಸಲು ಯಾವ ತಾಂತ್ರಿಕ ಅಡ್ಡಿ ಎನ್ನುವುದು ಬೆಳಗಾವಿ ಜನತೆಯನ್ನು ಕಾಡುತ್ತಿರುವ ಯಕ್ಷಪ್ರಶ್ನೆಯಾಗಿದೆ.
ವಂದೇ ಭಾರತ ರೈಲನ್ನು ಬೆಳಗಾವಿವರೆಗೂ ವಿಸ್ತರಣೆ ಮಾಡಲಾಗುವುದು ಎಂಬ ಜಗದೀಶ ಶೆಟ್ಟರ ಅವರ ಭರವಸೆ ಹುಸಿಯಾಗಿದೆ.
ವಂದೇ ಭಾರತ ರೈಲನ್ನು ಬೆಳಗಾವಿವರೆಗೆ ವಿಸ್ತರಣೆ ಮಾಡಲು ಅವಳಿ ನಗರದ ಪ್ರಭಾವಿಗಳ ಕಾಣದ ಕೈಗಳ ಕೈವಾಡ ಇರುವುದು ಗುಟ್ಟಿನ ಸಂಗತಿ ಏನಲ್ಲ.
ಈ ನಡುವೆ ಬೆಳಗಾವಿಯವರೇ ಆಗಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಬೆಳಗಾವಿ ಜಿಲ್ಲೆಗೆ ತಮ್ಮಿಂದಾಗಷ್ಟು ಕೊಡುಗೆಯನ್ನು ನೀಡುವಲ್ಲಿ ಆಹರ್ನಿಶಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಕೃಷಿ ಚಟುವಟಿಕೆ ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಮೇಲಿಂದ ಮೇಲೆ ಕೇಂದ್ರ ಸಚಿವರನ್ನು ಭೇಟಿಯಾಗಿ ಆ ಬಗ್ಗೆ ಒತ್ತಡ ಹೇರಿ ಅವುಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಇದೀಗ ಪುಣೆಯಿಂದ ಹುಬ್ಬಳ್ಳಿಗೆ ಸಂಚರಿಸುವ ರೈಲನ್ನು ಬೆಳಗಾವಿ ಜಿಲ್ಲೆಯ ಪ್ರಮುಖ ರೈಲ್ವೇ ನಿಲ್ದಾಣವಾಗಿರುವ ಘಟಪ್ರಭಾದಲ್ಲಿ ನಿಲುಗಡೆ ಮಾಡಬೇಕು ಎಂಬ ಜನತೆಯ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಿದ ಈರಣ್ಣ ಕಡಾಡಿ ಅವರು ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳುವಷ್ಟರ ಮಟ್ಟಿಗೂ ರಾಜ್ಯಸಭಾ ಸದಸ್ಯರಾಗಿ ಕೇಂದ್ರ ಸರಕಾರದ ಮಟ್ಟದಲ್ಲಿ ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡಿ ಜನರ ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದಾರೆ. ಈರಣ್ಣ ಅವರ ಕೆಲಸ ಕಾರ್ಯಗಳ ಬಗ್ಗೆ ಬೆಳಗಾವಿ ಜಿಲ್ಲೆಯ ಜನತೆಯಿಂದ ಅಭಿನಂದನೆ ಹಾಗೂ ಮಹಾಪೂರಗಳೇ ಹರಿದು ಬರುತ್ತಿವೆ.
ಆದರೆ, ಮಾಜಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿಯೂ ಬೆಳಗಾವಿಯಲ್ಲಿ ಬಹುದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದ ಜಗದೀಶ ಶೆಟ್ಟರ ಅವರಿಂದ ಬೆಳಗಾವಿ ಜಿಲ್ಲೆಯ ಕೆಲಸ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂಬ ಭಾವನೆ ಜನರ ಮನದಲ್ಲಿ ವ್ಯಕ್ತವಾಗುತ್ತಿದೆ. ಈ ಎಲ್ಲದರ ಪರಿಣಾಮವಾಗಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರಕಾರದ ಬಗ್ಗೆ ಜನರಲ್ಲಿ ನಿರಾಸೆ ಮೂಡಲು ಕಾರಣವಾಗಿದೆ.