ಬೆಂಗಳೂರು: ಬೆಂಗಳೂರು ವಿಜಯನಗರದ ನಿವಾಸಿ, ಮೂಲತಃ ಹಾವೇರಿಯ ನಾಗರಾಜ್ ತಮ್ಮ ತಂದೆ ಹಾವೇರಿಯಿಂದ ಬಂದಿದ್ದ ತಂದೆಯನ್ನು ಜುಲೈ 16ರಂದು ಸಿನಿಮಾ ತೋರಿಸಲು ಜಿಟಿ ಮಾಲ್ ಗೆ ಕರೆದುಕೊಂಡು ಹೋಗಿದ್ದರು. ಪಂಚೆ ಧರಿಸಿದ್ದ ಕಾರಣಕ್ಕೆಅವರಿಗೆ ಜಿಟಿ ಮಾಲ್ ಸಿಬ್ಬಂದಿ ಪ್ರವೇಶಕ್ಕೆ ನಿರಾಕರಿಸಿದ್ದರು. ಈ ಘಟನೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತ್ತು.
ಇದೀಗ ರಾಜ್ಯ ಸರಕಾರದ ಆದೇಶದ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ಮಾಲನ್ನು ಒಂದು ವಾರ ಮುಚ್ಚಿಸಿದ್ದಾರೆ. ಈ ಘಟನೆಯಿಂದ ನೊಂದಿರುವ ಮಾಲ್ ಮಾಲಿಕ ಎಸ್ ಟಿ ಆನಂದ್ ಅವರು ರೈತ ಫಕೀರಪ್ಪ ಹಾಗೂ ಪುತ್ರ ನಾಗರಾಜ್ ಅವರನ್ನು ಶುಕ್ರವಾರ ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆಸಿ ಮತ್ತೊಮ್ಮೆ ಸನ್ಮಾನಿಸಿದ್ದಾರೆ.
ಮೊನ್ನೆಯಷ್ಟೇ ಮಾಲ್ ನಲ್ಲಿ ಸಿಬ್ಬಂದಿ ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿ ಸನ್ಮಾನಿಸಿದ್ದರು. ಇದೀಗ, ತಮ್ಮ ಮನೆಗೆ ಅಹ್ವಾನಿಸಿ ಉಪಹಾರ ನೀಡಿ ಸನ್ಮಾನಿಸಿದ್ದಾರೆ. ಮಾಲಿಕ ಆನಂದ ಸ್ವತಃ ಕೈತುತ್ತಿನಲ್ಲಿ ತಿನ್ನಿಸಿದ್ದಾರೆ. ಸನ್ಮಾನ ಮಾಡುವಾಗ ಮಾಲೀಕರು ಸಹ ಪಂಚೆ ಧರಿಸಿದ್ದು ವಿಶೇಷ. ಈ ಸಂದರ್ಭದಲ್ಲಿ ಮಾತನಾಡಿರುವ ಆನಂದ, ನಾವು ಸಹಾ ರೈತರು. ಕೃಷಿಕರ ಬಗ್ಗೆ ಗೌರವವಿದೆ. ನೀವು ನಮ್ಮ ಮನೆಗೆ ಬಂದಿರುವುದು ಸಂತಸವಾಗಿದೆ. ನಾನು ಸರಕಾರಿ ಶಾಲೆಯಲ್ಲಿ ಓದಿದ್ದು ಎಂದೂ ಯಾರನ್ನು ಅವಮಾನಿಸಿಲ್ಲ. ಸಿಬ್ಬಂದಿಯಿಂದ ತಪ್ಪಾಗಿದ್ದು ದಯವಿಟ್ಟು ನೀವು ನಮ್ಮನ್ನು ಕ್ಷಮಿಸಬೇಕು ಎಂದು ಕೋರಿ ಔದಾರ್ಯತೆ ಮೆರೆದಿದ್ದಾರೆ.