ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಪ್ರಕರಣ ಸಂಬಂಧ ಎಫ್ಎಸ್ಎಲ್ ವರದಿ ಹೊರ ಬಿದ್ದಿದ್ದು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು ದೃಢಪಟ್ಟಿದೆ. ನಾಸಿರ್ ಸಾಬ್ ಜಿಂದಾಬಾದ್ ಮತ್ತು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. FSLನಲ್ಲಿ ಪರಿಶೀಲನೆ ವೇಳೆ ಆಡಿಯೋ ಮತ್ತು ವಿಡಿಯೋವನ್ನು ಎಡಿಟ್ ಮಾಡಿ ಸೇರಿಸಲಾಗಿಲ್ಲ. ಪಾಕ್ ಪರ ಘೋಷಣೆ ಕೂಗಿದ್ದು ನಿಜ ಎಂದು ತಿಳಿದು ಬಂದಿದೆ.
ಎಫ್ಎಸ್ಎಲ್ ವರದಿ ಅನ್ವಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಕೆಲ ಅನುಮಾನಿತ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಈಗಾಗಲೇ ವಶಕ್ಕೆ ಪಡೆದಿದ್ದ ಅನುಮಾನಿತ ವ್ಯಕ್ತಿಗಳ ವಾಯ್ಸ್ ರವಾನೆ ಮಾಡಲಾಗಿದೆ. ಅನುಮಾನಿತರ ಪೈಕಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.
ವಾಯ್ಸ್ ಮ್ಯಾಚ್ ಆದ ಕೂಡಲೇ ಅಧಿಕೃತವಾಗಿ ಆರೋಪಿಯನ್ನು ಬಂಧಿಸಲು ತಯಾರಿ ನಡೆದಿದೆ.
ವಿಧಾನಸೌಧ ಠಾಣೆ ಪೊಲೀಸರು ಈವರೆಗೆ 7 ಮಂದಿಯ ವಿಚಾರಣೆ ನಡೆಸಿದ್ದಾರೆ. ಮೂವರ ವಾಯ್ಸ್ ಸ್ಯಾಂಪಲ್ FSLಗೆ ರವಾನಿಸಿದ್ದಾರೆ. ವಿಚಾರಣೆಗೆ ಒಳಪಟ್ಟ ಎಲ್ಲರೂ ಪಾಕ್ ಪರ ಘೋಷಣೆ ಕೂಗಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಪೊಲೀಸರು 26 ಮಂದಿಯ ಪಟ್ಟಿ ಮಾಡಿದ್ದು, ಇನ್ನೂ 19 ಜನರ ವಿಚಾರಣೆ ನಡೆಸಬೇಕಿದೆ. ಈ ಹಿಂದೆ ಎಫ್ಎಸ್ಎಲ್ ವರದಿ ಬಂದರೂ ಸರ್ಕಾರ ವರದಿಯನ್ನು ಬಹಿರಂಗ ಪಡಿಸಿರಲಿಲ್ಲ. ಹೀಗಾಗಿ ಬಿಜೆಪಿ ಕಿಡಿಕಾರಿತ್ತು. ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ರು. FSL ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಗೊತ್ತಾಗಿದೆ. ರಾತ್ರಿ ವರದಿ ಬಂದರೂ ರಾಜ್ಯ ಸರ್ಕಾರ ಇನ್ನೂ ಬಹಿರಂಗ ಪಡಿಸಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದರು.