ಲಕ್ನೋ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಿವಾಹಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಬಭಾವಿಸಲಾಗಿದ್ದ ಈ ಘಟನೆಯನ್ನು ಇದು ಕೊಲೆ ಎಂದು ಅವರ ಐದು ವರ್ಷದ ಮಗಳು ಪೇಂಟಿಂಗ್ ಮೂಲಕ ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವವನ್ನು ಪ್ರಾರಂಭದಲ್ಲಿ ಎಲ್ಲರೂ ಆತ್ಮಹತ್ಯೆಯೆಂದೇ ಭಾವಿಸಿದ್ದರು.. ಆದರೆ ಆ ದಂಪತಿಯ ಐದು ವರ್ಷದ ಮಗಳು ತನಗೆ ತೋಚಿದ ರೀತಿಯಲ್ಲಿ ಚಿತ್ರವೊಂದನ್ನು ಬಿಡಿಸಿ, ಅದರಲ್ಲಿ ತನ್ನ ತಾಯಿಯನ್ನು ತನ್ನ ತಂದೆ ಹಿಂಸಿಸಿ ಸಾಯಿಸಿರುವುದಾಗಿ ಚಿತ್ರಿಸಿದ್ದು, ಈ ಸುಳಿವಿನಿಂದಾಗಿ ಈಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಝಾನ್ಸಿಯ ಕೋಟ್ವಾಲಿ ಪ್ರದೇಶದ ಪಂಚವಟಿ ಎಂಬ ಪ್ರದೇಶದ ಶಿವ ಪರಿವಾರ ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ಗಂಡನ ಸೋದರ ಸಂಬಂಧಿಗಳು ಮಹಿಳೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಆದರೆ, ಈ ಮಹಿಳೆಯ ಪುಟ್ಟ ಮಗುವಿನ ಒಂದು ಡ್ರಾಯಿಂಗ್ ಹಾಗೂ ಆಕೆ ನೀಡಿದ ಹೇಳಿಕೆಯಿಂದ, ಈ ಮಹಿಳೆಯನ್ನು ಪತಿಯೇ ಸಾಯಿಸಿ ಬಳಿಕ ನೇಣು ಹಾಕಿಕೊಂಡಂತೆ ಸೃಷ್ಟಿಸಿದ್ದ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಮೃತ ಮಹಿಳೆಯ ಮಗಳು ತನ್ನ ತಂದೆಯೇ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬುದನ್ನು ಸ್ಕೆಚ್ ಮೂಲಕ ವಿವರಿಸಲು ಪ್ರಯತ್ನಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಮಗಳು ಪೊಲೀಸರ ಮುಂದೆ ಸಾಕ್ಷಿ ಹೇಳಿದ್ದಾಳೆ.
ಪತಿಯ ಹಿಂಸೆಯಿಂದ ಸಾವಿಗೀಡಾದ ಮಹಿಳೆಯನ್ನು ಸೋನಾಲಿ ಬುಢೋಲಿಯಾ ಎಂದು ಗುರುತಿಸಲಾಗಿದೆ. ಮತ್ತು ಈಕೆಯ ಪತಿಯನ್ನು ಸಂದೀಪ ಬುಢೋಲಿಯಾ ಎಂದು ಗುರುತಿಸಲಾಗಿದ್ದು, ಈತ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ.
2019ರಲ್ಲಿ ಝಾನ್ಸಿ ನಿವಾಸಿಯಾದ ಸಂದೀಪ ಬುದೋಲಿಯಾನನ್ನು ಸೋನಾಲಿ ವಿವಾಹವಾಗಿದ್ದರು. ಮದುವೆಯ ಸಂದರ್ಭದಲ್ಲಿ 20 ಲಕ್ಷ ರೂ. ಹಣ ಹಾಗೂ ಇನ್ನಿತರ ಉಡುಗೊರೆಗಳನ್ನು ವರದಕ್ಷಿಣೆ ರೂಪದಲ್ಲಿ ಸಂದೀಪಗೆ ನೀಡಲಾಗಿತ್ತು. ಸಂದೀಪ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ರೂಪದಲ್ಲಿ ಕಾರು ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ಮೃತ ಮಹಿಳೆಯ ತಂದೆ ಸಂಜಯ ತ್ರಿಪಾಠಿ ದೂರಿದ್ದಾರೆ.
ಅವರು ಕಾರೊಂದನ್ನು ಕೇಳಿದರು. ಆದರೆ ನನಗೆ ಅದು ಸಾಧ್ಯವಿಲ್ಲ ಎಂದು ಹೇಳಿದೆ. ಆ ಬಳಕ ಅವರೆಲ್ಲರೂ ಸೇರಿಕೊಂಡು ನನ್ನ ಮಗಳಿಗೆ ಪ್ರತೀದಿನ ಹಿಂಸೆ ನೀಡಲಾರಂಭಿಸಿದರು. ಈ ವಿಚಾರದಲ್ಲಿ ನಾನು ಪೊಲೀಸರಿಗೂ ದೂರು ನೀಡಿದ್ದೆ, ಅಲ್ಲಿ ಎರಡೂ ಕಡೆಯವರ ನಡುವೆ ಮಾತುಕತೆ ನಡೆದು ಪ್ರಕರಣ ಕೈಬಿಡಲಾಗಿತ್ತು’ ಎಂದು ತ್ರಿಪಾಠಿ ಹೇಳಿಕೊಂಡಿದ್ದಾರೆ.
ನಂತರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂದು ಸಂದೀಪ ಕುಟುಂಬಸ್ಥರು ಆಕೆಗೆ ಹಿಂಸೆ ನೀಡಲು ಪ್ರಾರಂಭಿಸಿದ್ದರು. ಹೆರಿಗೆಯ ಸಂದರ್ಭದಲ್ಲೂ ಸಂದೀಪ ಹಾಗೂ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ್ದರು. ಬಳಿಕ ನಾನು ಆಸ್ಪತ್ರೆಯ ಬಿಲ್ ಪಾವತಿಸಿ ಮಗು ಹಾಗೂ ಆಕೆಯನ್ನು ಮನೆಗೆ ಕರೆದುಕೊಂಡು ಹೋದೆ ಎಂದು ಸಂಜಯ ಹೇಳಿದ್ದಾರೆ.
ಅಪ್ಪ, ಅಮ್ಮನಿಗೆ ಹೊಡೆದು ಬಳಿಕ ನೇಣಿಗೆ ಹಾಕಿದ್ದಾನೆ. ಅಮ್ಮನ ತಲೆಗೆ ಕಲ್ಲಿನಿಂದ ಹೊಡೆದು ಚೀಲದಲ್ಲಿ ಹಾಕಿ ಎಸೆದಿದ್ದಾನೆ. ಅಮ್ಮನಿಗೆ ಅಪ್ಪ ಹೊಡೆಯುತ್ತಿದ್ದರು. ಅಮ್ಮನಿಗೆ ಹೊಡೆದರೆ ನಿಮ್ಮ ಕೈ ಮುರಿಯುತ್ತೇನೆ ಎಂದಿದ್ದೆ. ಅಮ್ಮನಿಗೆ ಹೊಡೆದು ಕೊಂದಿದ್ದಾರೆ. ನನಗೂ ಸಹ ಹೊಡೆಯುತ್ತಿದ್ದರು ಎಂದು ಐದು ವರ್ಷದ ಮಗು ಪೊಲೀಸರ ಬಳಿ ಹೇಳಿದ್ದಾಳೆ
ಪೊಲೀಸರು ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪತಿ ಸಂದೀಪನನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.