ನವದೆಹಲಿ: ಯುಪಿಐ ವಹಿವಾಟು ಸೇರಿದಂತೆ ಎಲ್ಲ ಡಿಜಿಟಲ್ ವಹಿವಾಟಿಗಳಿಗೆ ಎರಡು ಹಂತದ ದೃಢೀಕರಣ ಬುಧವಾರದಿಂದ ಜಾರಿಗೆ ಬಂದಿದೆ.
ಆನ್ಲೈನ್ ಮೂಲಕ ನಡೆಯುವ ಹಣಕಾಸಿನ ವಂಚನೆಗಳನ್ನು ತಡೆಗಟ್ಟಲು ಆರ್ಬಿಐ ಈ ಕ್ರಮ ಜಾರಿಗೆ ತಂದಿದೆ. ಬಳಕೆದಾರರು ಈ ಎರಡೂ ಹಂತಗಳನ್ನು ಪೂರ್ಣಗೊಳಿಸಿದರೆ ಮಾತ್ರ ವಹಿವಾಟು ನಡೆಸಬಹುದಾಗಿದೆ. ಯಾರಾದರೂ ನಿಮ್ಮ ಪಿನ್ ನೋಡಿದರೂ ಸಹ, ಅನಧಿಕೃತ ಪಾವತಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಬ್ಯಾಂಕ್ಗಳು, ಬ್ಯಾಂಕೇತರ ಸಂಸ್ಥೆಗಳು ಸೇರಿದಂತೆ ಪಾವತಿ ಸೇವೆ ಒದಗಿಸುವ ಪೂರೈಕೆದಾರರು ಈ ನಿರ್ದೇಶನವನ್ನು ಪಾಲಿಸುವಂತೆ ಆರ್ಬಿಐ ತಿಳಿಸಿದೆ.
ಇಂದಿನಿಂದ ಬಳಕೆದಾರರು ಯುಪಿಐ ಪಿನ್ ಅಷ್ಟೇ ನಮೂದಿಸುವ ಮೂಲಕ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. ಒಟಿಪಿ, ಬೆರಳಚ್ಚು ದೃಢೀಕರಣ ಅಥವಾ ಮುಖಚಹರೆ ಗುರುತಿಸುವ ಮೂಲಕ ವಹಿವಾಟು ನಡೆಸಬೇಕಿದೆ. ಇದಲ್ಲದೆ, ಬ್ಯಾಂಕಿಂಗ್ ಆ್ಯಪ್ನಲ್ಲಿ ಬಳಕೆದಾರರು ಸ್ಕಿನ್ಶಾಟ್ ಅಥವಾ ಸ್ಟ್ರೀನ್ ರೆಕಾರ್ಡ್ ಮಾಡಲು ಬರುವುದಿಲ್ಲ ಎಂದು ತಿಳಿಸಿದೆ.


