ವಿಜಯಪುರ : ಕೌಟುಂಬಿಕ ಕಲಹದ ಕಾರಣದಿಂದ ತಾಯಿಯೊಬ್ಬಳು ತನ್ನ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಆಲಮಟ್ಟಿಯ ಬೇನಾಳ ಬ್ರಿಜ್ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆಯಲ್ಲಿ ಮಕ್ಕಳು ಸಾವಿಗೀಡಾಗಿದ್ದು, ತಾಯಿ ಭಾಗ್ಯ ಅವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ.
ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ನಿಂಗರಾಜ ಭಜಂತಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಹಸನ ನಿಂಗರಾಜ ಭಜಂತ್ರಿ ಹಾಗೂ 13 ತಿಂಗಳು ಮಗು ನೀರು ಪಾಲಾಗಿದ್ದಾರೆ.
ಭಾಗ್ಯ ನಿಂಗರಾಜ ಭಜಂತ್ರಿ, ಕೌಟುಂಬಿಕ ಕಾರಣಕ್ಕೆ ಬೇಸತ್ತು, ತನ್ನ ನಾಲ್ಕು ಮಕ್ಕಳನ್ನು ನೀರಿಗೆ ಎಸೆದು, ತಾನೂ ಜಿಗಿದಿದ್ದಾರೆ. ಮೀನುಗಾರರು ಮಕ್ಕಳ ತಾಯಿ ಭಾಗ್ಯಳನ್ನು ನೀರಿನಿಂದ ಹೊರ ತೆಗೆದು ಬದುಕಿಸಿದ್ದಾರೆ. ಸದ್ಯ ಇಬ್ಬರು ಹೆಣ್ಣು ಮಕ್ಕಳ ಮೃತದೇಹವನ್ನು ಮೀನುಗಾರರು ಹೊರತೆಗೆದಿದ್ದಾರೆ. ಇಬ್ಬರು ಗಂಡು ಮಕ್ಕಳ ಶವಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರಿಂದ, ನಿಡಗುಂದಿ ಸಿಪಿಐ ಅಶೋಕ ಚವ್ಹಾನ, ಪಿಎಸ್ ಐ ಶಿವಾನಂದ ಪಾಟೀಲ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.