ಬೆಳಗಾವಿ : ಜಗತ್ತಿನ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ವ್ಯವಸ್ಥೆ ಎಂದರೆ ಅದು ಪ್ರಜಾಪ್ರಭುತ್ವ ಎಂದು ಕೆಎಲ್ ಇ ಜಿ.ಎ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರವೀಂದ್ರ ಪಾಟೀಲ ಹೇಳಿದರು.
ನಗರದ ಜಿಎ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ರವಿವಾರ ನಡೆದ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಸುಮಾರು 144 ಕೋಟಿ ಜನಸಂಖ್ಯೆ ಹೊಂದಿದೆ. ದೇಶ ಸ್ವತಂತ್ರ ಪಡೆಯುವಾಗ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗುತ್ತದೋ ?ಇಲ್ಲವೋ ?ಎಂಬ ಸಂದೇಹಗಳು ವ್ಯಕ್ತವಾಗಿದ್ದವು. ಆದರೆ, ಇಂದು ಭಾರತದಲ್ಲಿ ಈ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿದೆ .ಇದು ಇಡೀ ದೇಶ ಹೆಮ್ಮೆಪಡುವ ಸಂಗತಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಪ್ರತಿಯೊಬ್ಬರು ಸಮಾನತೆ ಪಡೆಯಬಹುದಾಗಿದೆ. ಧಾರ್ಮಿಕ, ರಾಜಕೀಯ ಸೇರಿದಂತೆ ಎಲ್ಲಾ ಸ್ವಾತಂತ್ರ್ಯಗಳನ್ನು ಇಲ್ಲಿ ಕಾಣಬಹುದು. ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನುವುದು ಅತ್ಯಂತ ಶ್ರೇಷ್ಠ ವ್ಯವಸ್ಥೆಯಾಗಿ ಪರಿಗಣಿಸಲ್ಪಟ್ಟಿದ್ದು ಪ್ರತಿಯೊಬ್ಬರಿಗೂ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಇಲ್ಲಿ ಅವಕಾಶಗಳಿವೆ. ಮೀನುಗಾರನ ಮಗನಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಹುದ್ದೆವರೆಗೂ ಏರುವ ಮೂಲಕ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದ್ದಾರೆ. ಭಾರತದಲ್ಲಿ ಏಳಕ್ಕೂ ಹೆಚ್ಚು ಧರ್ಮಗಳು, 4000 ಕ್ಕೂ ಹೆಚ್ಚು ಜಾತಿ-ಉಪಜಾತಿಗಳು ಇದ್ದು ಇಲ್ಲಿ ಜಗತ್ತಿನಲ್ಲಿ ಅತ್ಯಂತ ಜನಪ್ರಿಯವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಣಬಹುದು ಎಂದು ಅವರು ಹೇಳಿದರು.
ಆಜೀವ ಸದಸ್ಯ ಮಹಾದೇವ ಬಳಿಗಾರ, ಉಪ ಪ್ರಾಚಾರ್ಯ ದೇವಋಷಿ ಹಾಗೂ ಉಪನ್ಯಾಸಕ- ಶಿಕ್ಷಕ ಬಳಗ ಉಪಸ್ಥಿತರಿದ್ದರು.