ನವದೆಹಲಿ: ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ.
ದೇಶದಾದ್ಯಂತ ಲೋಕಸಭೆ ಚುನಾವಣೆಯು ಏಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 26 ಮತ್ತು ಮೇ 7ರಂದು ಮತದಾನ ನಡೆಯಲಿದೆ.
ಲೋಕಸಭೆ ಚುನಾವಣೆ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿದರು.
ದೇಶದಲ್ಲಿ ಸುಮಾರು 97 ಕೋಟಿ ಮತದಾರರಿದ್ದಾರೆ. 49.7 ಕೋಟಿ ಪುರುಷ ಮತದಾರರು, 47.1 ಕೋಟಿ ಮಹಿಳಾ ಮತದಾರರು ಇದ್ದಾರೆ. 1.8 ಕೋಟಿ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ.
ಈ ಚುನಾವಣೆ ಪ್ರಕ್ರಿಯೆಯಲ್ಲಿ 1.5 ಕೋಟಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದರು.
ಅರುಣಾಚಲ ಪ್ರದೇಶದ 60, ಸಿಕ್ಕಿಂನ 32 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 19ರಂದು ಚುನಾವಣೆ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಶನಿವಾರ ಘೋಷಿಸಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ‘ಜೂನ್ 2024ಕ್ಕೆ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ವಿಧಾನಸಭಾ ಅವಧಿ ಮುಕ್ತಾಯಗೊಳ್ಳಲಿದೆ’ ಎಂದರು.
ಅರುಣಾಚಲ ಪ್ರದೇಶದಲ್ಲಿ ಆಡಳಿತರೂಢ ಬಿಜೆಪಿ ಈಗಾಗಲೇ 60 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇಂಡಿಯಾ ಮೈತ್ರಿಕೂಟ, ಎನ್ಪಿಪಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ. 2019ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 41 ಸ್ಥಾನಗಳನ್ನು ಗೆದ್ದಿದ್ದು, ಜೆಡಿಯು 7, ಕಾಂಗ್ರೆಸ್ 4 ಮತ್ತು ಎನ್ಪಿಪಿ ಸ್ಥಾನಗಳನ್ನು ಗೆದ್ದಿತ್ತು.
2019ರಲ್ಲಿ ನಡೆದ ಸಿಕ್ಕಿಂ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 17 ಸ್ಥಾನಗಳನ್ನು ಗೆದ್ದಿದ್ದು, ಸಿಕ್ಕಿಂ ಡೆಮೋಕ್ರೆಟಿಕ್ ಫ್ರಂಟ್ ಪಕ್ಷ 15 ಸೀಟುಗಳನ್ನು ಗೆದ್ದಿತ್ತು.