ಕಾರವಾರ:
ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಚಂಡಿಯಾ ಗ್ರಾಮದಲ್ಲಿ ಜನರೊಂದಿಗೆ ಸ್ನೇಹದಿಂದ ಇದ್ದು ಅವರು ಕೊಟ್ಟ ಆಹಾರ ತಿಂದು ಬದುಕಿದ್ದ ಕಾಡುಹಂದಿಯನ್ನು ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ವರದಿ ಪ್ರಕಾರ, ಈ ಹಂದಿ ಊರಿನಲ್ಲಿ ಜನರು ನೀಡಿದ ಆಹಾರವನ್ನ ಸೇವಿಸುತ್ತ ಜನರ ಪ್ರೀತಿ ಗಳಿಸಿತ್ತು. ಕಾಂತಾರ ಸಿನೆಮಾ ನೋಡಿದ ನಂತರ ಅದಕ್ಕೆ ಆಹಾರ ನೀಡುವ ಪರಿಪಾಠ ಹೆಚ್ಚಾಗಿತ್ತು ಎನ್ನಲಾಗಿದೆ. ದಿನನಿತ್ಯ ಒಬ್ಬರಲ್ಲ ಒಬ್ಬರು ಅದಕ್ಕೆ ಆಹಾರವನ್ನು ನೀಡುತ್ತಿದ್ದರು. ಅದನ್ನು ಪೂಜ್ಯ ಭಾವನೆಯಿಂದ ನೋಡುತ್ತಿದ್ದರು. ಕಾಡಹಂದಿಯೂ ಅಷ್ಟೆ, ಜನರ ಮಧ್ಯೆ ಬರುತ್ತಿದ್ದರೂ ಯಾರಿಗೂ ತೊಂದರೆ ಕೊಟ್ಟಿರಲಿಲ್ಲ. ಜನ ಕೊಟ್ಟ ಆಹಾರ ಸೇವಿಸಿ ಹೋಗುತ್ತಿತ್ತು.
ಆದರೆ ಶುಕ್ರವಾರ ರಾತ್ರಿ ಯಾರೋ ದುಷ್ಕರ್ಮಿಗಳು ಕೋಳಿ ಮಾಂಸದಲ್ಲಿ ಸ್ಪೋಟಕ ಇಟ್ಟು ಕಾಡು ಹಂದಿಯನ್ನು ಹತ್ಯೆ ಮಾಡಿದ್ದಾರೆ. ಗ್ರಾಮಸ್ಥರು ನೀಡುವ ಆಹಾರದ ಸಲುವಾಗಿ ಈ ಕಾಡುಹಂದಿ ಬರುವ ಜಾಗದಲ್ಲಿ ದುಷ್ಕರ್ಮಿಗಳು ಕೋಳಿಮಾಂಸದಲ್ಲಿ ಸ್ಫೋಟಕ ಇಟ್ಟಿದ್ದಾರೆ. ಅದು ಎಂದಿನಂತೆ ಬಂದು ಆಹಾರ ನೀಡಿದ್ದಾರೆಂದು ಭಾವಿಸಿ ಅದಕ್ಕೆ ಬಾಯಿ ಹಾಕಿದೆ. ತಕ್ಷಣವೇ ಅದು ಸ್ಫೋಟಗೊಂಡಿದ್ದು, ಹಂದಿ ಸಾವಿಗೀಡಾಗಿದೆ. ಸದ್ದು ಕೇಳಿ ಜನ ಓಡಿಬಂದಿದ್ದು, ಕಳ್ಳ ಬೇಟೆಗಾರರು ಅಲ್ಲಿಂದ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿದೆ. ಜನರು ಈ ಬಗ್ಗೆ ಕಾರವಾರ ಅರಣ್ಯ ಇಲಾಖೆಗೆ ದೂರು ನೀಡಿದ್ದು, ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಆಗ್ರಹಿಸಿದ್ದಾರೆ.