ರಾಜ್ಯದಲ್ಲಿ ಇದೀಗ ಚುನಾವಣೆ ನಡೆಯುತ್ತಿರುವುದರಿಂದ ಹೆಲಿಕಾಪ್ಟರ್ ಗಳಿಗೆ ಭಾರೀ ಬೇಡಿಕೆ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಬಾಡಿಗೆಗೆ ಹೆಲಿಕಾಪ್ಟರ್ ಬುಕ್ ಮಾಡುತ್ತಿದ್ದಾರೆ. ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು ಸದ್ಯವೇ ನೀತಿ ಸಂಹಿತೆ ಜಾರಿ ಆಗುವ ಸಾಧ್ಯತೆ ಇದೆ. ನೀತಿ ಸಂಹಿತೆ ಜಾರಿಗೊಂಡ ನಂತರ ನಾಯಕರು ರಾಜ್ಯದ ವಿವಿಧೆಡೆ ತೆರಳಿ ಬಹಿರಂಗ ಸಮಾವೇಶ ಮತ್ತು ಕಾರ್ಯಕ್ರಮ ನಡೆಸಿ ಚುನಾವಣಾ ಪ್ರಚಾರ ಕೈಗೊಳ್ಳುವರು. ಆದ್ದರಿಂದ ಪ್ರಯಾಣಕ್ಕೆ ಖಾಸಗಿ ಕಂಪನಿಗಳ ಹೆಲಿಕಾಪ್ಟರ್ ಬಾಡಿಗೆ ಪಡೆಯಲು ಮುಂದಾಗಲಿದ್ದಾರೆ.
ಹೆಲಿಕಾಪ್ಟರ್ ಮತ್ತು ಮಿನಿ ವಿಮಾನಗಳಿಗೆ ಬೇಡಿಕೆ ಜಾಸ್ತಿ. ಆದಕಾರಣ ವಿವಿಧ ಕಂಪನಿಗಳು ಬಾಡಿಗೆಗೆ ದರ ನಿಗದಿಪಡಿಸಿವೆ. ಪ್ರತಿ ಗಂಟೆಗೆ ದರ ವಿಧಿಸಲಾಗುತ್ತದೆ. ಲ್ಯಾಂಡಿಂಗ್ ಮತ್ತು
ಟೇಕಾಫ್ ಗಳಿಗೆ ಬಾಡಿಗೆದರದಲ್ಲಿ ವ್ಯತ್ಯಾಸವಾಗಲಿವೆ. ನಾಯಕರ ಬೇಡಿಕೆಗೆ ತಕ್ಕಂತೆ ವಿಮಾನವನ್ನು ಬಾಡಿಗೆಗೆ ನೀಡಲಾಗುತ್ತದೆ. ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿಮಾನಯಾನ ಕಂಪೆನಿಗಳು ದೆಹಲಿ, ಕೊಲ್ಕತ್ತಾ, ಕೊಚ್ಚಿಯಿಂದ ಹೆಲಿಕಾಪ್ಟರ್ ಬೆಂಗಳೂರಿಗೆ ತರಿಸಿವೆ.
ಬೆಳಗಾವಿ : 2013 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಸತೀಶ ಜಾರಕಿಹೊಳಿ ಅವರು ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರ್ ಬಳಕೆ ಮಾಡಿ ಭಾರಿ ಸುದ್ದಿಯಾಗಿದ್ದರು. ಅದಕ್ಕೂ ಮುನ್ನ ಬಳ್ಳಾರಿ ಗಣಿಧಣಿಗಳು ಸ್ವಂತ ಹೆಲಿಕಾಪ್ಟರ್ ಹೊಂದಿ ಸುದ್ದಿಯಾಗಿದ್ದರು.2013 ರ ಚುನಾವಣೆ ಸಂದರ್ಭದಲ್ಲಿ ಬಾಡಿಗೆ ರೂಪದಲ್ಲಿ ಹೆಲಿಕಾಪ್ಟರ್ ತಂದಿದ್ದರು. 2018 ರ ವಿಧಾನ ಸಭಾ ಚುನಾವಣೆ ವೇಳೆ ಸ್ವತಃ ಹೆಲಿಕಾಪ್ಟರ್ ಖರೀದಿಸಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದರು.
ರಾಜ್ಯದ ವಿಧಾನಸಭೆ ಚುನಾವಣೆ ಮೇನಲ್ಲಿ ನಡೆಯಲಿದೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಈಗಾಗಲೇ ವಿವಿಧ ಪಕ್ಷಗಳು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿವೆ. ಪ್ರಮುಖ ನಾಯಕರು ರಾಜ್ಯಾದ್ಯಂತ ಪ್ರವಾಸಕ್ಕೆ ತಮ್ಮದೇ ರೂಪುರೇಷೆ ಹೆಣೆಯುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿರುವ ಸತೀಶ ಜಾರಕಿಹೊಳಿಯವರು ಈ ಬಾರಿಯ ಚುನಾವಣೆ ಪ್ರಚಾರಕ್ಕಾಗಿ ಮತ್ತೆ ಹೆಲಿಕಾಪ್ಟರ್ ಬಳಕೆ ಮಾಡುತ್ತಾರೆ ಎಂಬ ಚರ್ಚೆ ಈಗ ಮತ್ತೆ ಮುನ್ನಲೆಗೆ ಬಂದಿದೆ.
ಕಳೆದ ಚುನಾವಣೆ ವೇಳೆ ಅವರು ಬೆಳಗಾವಿ ನಗರ, ಯಮಕನಮರಡಿ ಕ್ಷೇತ್ರದ 8 ಸ್ಥಳಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಿದ್ದರು. ಬೆಲ್ ಕಂಪನಿಯ ಹೆಲಿಕಾಪ್ಟರ್ ನಲ್ಲಿ 5 ಜನ ಪ್ರಯಾಣಿಸಬಹುದಾಗಿತ್ತು. ಕಾಂಗ್ರೆಸ್ ಪಕ್ಷದ ಮಾಸ್ಟರ್ ಮೈಂಡ್ ಆಗಿರುವ ಸತೀಶ ಜಾರಕಿಹೊಳಿ ಅವರ ಕಾರ್ಯತಂತ್ರ ಈ ಬಾರಿ ಏನಿರಲಿದೆ ಎಂಬುದು ಕಾದು ನೋಡಬೇಕಾಗಿದೆ.
ಧೂಳೆಬ್ಬಿಸುವ ಹೆಲಿಕಾಪ್ಟರ್ :
ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಹೆಲಿಕಾಪ್ಟರ್ ಮತ್ತು ವಿಮಾನ ಪಾರ್ಕಿಂಗ್ ಗೆ ವಿಮಾನ ಯಾನ ಕಂಪನೆಗಳು ನಿಗದಿತ ಪಾರ್ಕಿಂಗ್ ಶುಲ್ಕ ಪಾವತಿಸಬೇಕು. ಮಂಗಳೂರು ಹಾಗೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಂಟು ಗಂಟೆ ಅವಧಿಗೆ 50,000 ನಿಗದಿ ಪಡಿಸಲಾಗಿದೆ. ಮುಂಬೈ ಮತ್ತು ದೆಹಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪಾರ್ಕಿಂಗ್ ಶುಲ್ಕ ಕಡಿಮೆ. ಹುಬ್ಬಳ್ಳಿ, ಜಕ್ಕೂರು, ಎಚ್ಎಎಲ್, ಬೀದರ್, ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಎಂಟು ಗಂಟೆ ಅವಧಿಗೆ ಶುಲ್ಕ ಇಪತ್ತು ಸಾವಿರ ನಿಗದಿ ಮಾಡಲಾಗಿದೆ. ವಿವಿಐಪಿ ಪ್ರಯಾಣಿಸುವ ಹೆಲಿಕಾಪ್ಟರ್ ಗಳಿಗೆ ದುಬಾರಿ ಬಾಡಿಗೆ ಇರಲಿದೆ. ಈ ಹೆಲಿಕಾಪ್ಟರ್ ಗಳಿಗೆ ಒಂದು ದಿನ ಮುಂಚಿತವಾಗಿ ಟ್ರಯಲ್ ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಬೇಕಾಗಿರುವುದರಿಂದ ಬಾಡಿಗೆ ಹೆಚ್ಚಿದೆ. ಹೆಲಿಕಾಪ್ಟರ್ ಜೊತೆಗೆ ಗಣ್ಯರ ಪ್ರಯಾಣಕ್ಕೆ ದುಬಾರಿ ಕಾರುಗಳನ್ನು ಬಾಡಿಗೆ ನೀಡಲಾಗುತ್ತದೆ. ಒಟ್ಟಾರೆ ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಹೆಲಿಕಾಪ್ಟರ್ ಸದ್ದು ದೊಡ್ಡ ಪ್ರಮಾಣದಲ್ಲಿ ಧೂಳೆಬ್ಬಿಸಲಿದೆ.