ಬೆಳಗಾವಿ :
ನಗರದಲ್ಲಿ ವಾಹನ ಸಂಚಾರ ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ-48 ರಿಂದ ಕಿತ್ತೂರು ಚನ್ನಮ್ಮ ವೃತ್ತದವರೆಗೆ ಒಟ್ಟಾರೆ 4.50 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಮಾಡಬೇಕು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಬಹುದಿನಗಳ ಕನಸಿನ ಯೋಜನೆಗೆ ಇದೀಗ ಚಾಲನೆ ಲಭಿಸಿದೆ.
ಬೆಳಗಾವಿ ನಗರದ ಫ್ಲೈಓವರ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆ ನಡೆಯಿತು.
ಫ್ಲೈ ಓವರ್ ನಿರ್ಮಾಣವು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಕನಸಿನ ಯೋಜನೆಯಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಮುಂಬರುವ ದಿನಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಫ್ಲೈಓವರ್ ನಿರ್ಮಿಸಲು ಉದ್ಧೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಈ ಫ್ಲೈಓವರ್ ನಿರ್ಮಾಣದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಅಶೋಕ ವೃತ್ತ, ಆರ್.ಟಿ.ಒ. ವೃತ್ತ ಮತ್ತು ಕಿತ್ತೂರು ಚೆನ್ನಮ್ಮ ವೃತ್ತದವರೆಗೆ ಸಂಚಾರ ಸುಗಮಗೊಳ್ಳಲಿದೆ.
ನೂತನ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಗಳಿಗೆ ಅನುಕೂಲವಾಗುವಂತೆ ಫ್ಲೈಓವರ್ ವಿನ್ಯಾಸಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಫ್ಲೈಓವರ್ ಯೋಜನೆ ಪಕ್ಷಿನೋಟ:
ರಾಷ್ಟ್ರೀಯ ಹೆದ್ದಾರಿ(ಎನ್.ಎಚ್-48)ಯಿಂದ ಸಂಕಮ್ ಹೋಟೆಲ್, ಅಶೋಕ ವೃತ್ತ, ಆರ್.ಟಿ.ಓ. ವೃತ್ತದ ಮೂಲಕ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ ಫ್ಲೈ ಓವರ್ ನಿರ್ಮಾಣಗೊಳ್ಳಲಿದೆ.
ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಅಶೋಕ ವೃತ್ತ ಮತ್ತು ಕಿತ್ತೂರು ಚನ್ನಮ್ಮ ವೃತ್ತದಲ್ಲಿ “ರೋಟರಿ” ನಿರ್ಮಿಸಲಾಗುತ್ತದೆ.
ಅಶೋಕ ವೃತ್ತದಲ್ಲಿ ಒಂದು ರ್ಯಾಂಪ್ ಬಸ್ ನಿಲ್ದಾಣ, ಒಂದು ಆರ್.ಟಿ.ಓ. ವೃತ್ತದ ಕಡೆ ಹಾಗೂ ಇನ್ನೊಂದು ರ್ಯಾಂಪ್ ಮಹಾಂತೇಶ ನಗರ ಕಡೆಯ ರಸ್ತೆಗೆ ಸೇರಲಿದೆ.
ಅದೇ ರೀತಿ ಆರ್.ಟಿ.ಒ. ವೃತ್ತದಲ್ಲಿ ಕೂಡ ಮೂರು ರ್ಯಾಂಪ್ ಗಳಿರಲಿವೆ. ಚನ್ನಮ್ಮ ವೃತ್ತ, ಕೃಷ್ಣ ದೇವರಾಯ ವೃತ್ತ(ಕೊಲ್ಲಾಪುರ ಸರ್ಕಲ್) ಹಾಗೂ ಬಸ್ ನಿಲ್ದಾಣ ಕಡೆ ಸಂಪರ್ಕ ಕಲ್ಪಿಸಲಿವೆ.
ಇದಲ್ಲದೇ ಒಂದು ರಸ್ತೆ ಮೇಲ್ಸೇತುವೆ(ಆರ್.ಓ.ಬಿ) ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸರ್ವೀಸ್ ರಸ್ತೆಯನ್ನು ಕಲ್ಪಿಸಲು ಉದ್ದೇಶಿಸಲಾಗಿರುತ್ತದೆ.
ನಗರದ ಹೃದಯಭಾಗವಾಗಿರುವ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಕೂಡು ರಸ್ತೆಗಳಲ್ಲಿ ದೊಡ್ಡ ಕಮಾನುಗಳಿರಲಿವೆ. ಒಟ್ಟಾರೆ 4.50 ಕಿ.ಮೀ. ಉದ್ದದ ಫ್ಲೈಓವರ್ ಇದಾಗಿರಲಿದೆ.
ಬಿಎಸ್ಎನ್ಎಲ್, ಹೆಸ್ಕಾಂ, ಕೆ.ಎಸ್.ಆರ್.ಟಿ.ಸಿ ಹಾಗೂ ನಗರ ನೀರು ಸರಬರಾಜು ಮಂಡಳಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸದರಿ ಕಾಮಗಾರಿ ವ್ಯಾಪ್ತಿಯಲ್ಲಿರುವ ಆಯಾ ಇಲಾಖೆಗೆ ಸಂಬಂಧಿಸಿದ ವ್ಯವಸ್ಥೆಯನ್ನು ತಾತ್ಕಾಲಿಕ ಸ್ಥಳಾಂತರಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನಿರ್ದೇಶನ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಂದ್ರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್.ಸೊಬರದ, ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಭೂಸ್ವಾಧೀನ ಇಲಾಖೆಯ ಅಧಿಕಾರಿ ಬಲರಾಮ್ ಚವಾಣ, ಪಾಲಿಕೆ, ಲೋಕೋಪಯೋಗಿ, ಬಿಎಸ್ಎನ್ಎಲ್, ಹೆಸ್ಕಾಂ, ಕೆ.ಎಸ್.ಆರ್.ಟಿ.ಸಿ ಹಾಗೂ ನಗರ ನೀರು ಸರಬರಾಜು ಮಂಡಳಿ, ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯ ಸಭೆಯಲ್ಲಿ ಉಪಸ್ಥಿತರಿದ್ದರು.