ಬೆಳಗಾವಿ :
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಎರಡು ಸಲ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ನಾಗಪುರ ಪೊಲೀಸರು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಜಯೇಶ್ ಪೂಜಾರಿ/ಜಯೇಶ ಕಾಂತ ಇವನ ವಿರುದ್ಧ ಪ್ರಕರಣ ದಾಖಲಾಗಿದ್ದು ಇಂದು ಬೆಳಿಗ್ಗೆ ಆತನನ್ನು ಹಿಂಡಲಗಾ ಜೈಲಿನಿಂದ ವಿಮಾನ ಮೂಲಕ ನಾಗಪುರಕ್ಕೆ ಕರೆದೊಯ್ಯಲಾಗಿದೆ.
ಈತ ಜನವರಿ 14 ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಕರೆ ಮಾಡಿ 100 ಕೋಟಿ ನೀಡದೆ ಇದ್ದರೆ ಸಚಿವರನ್ನು ಕೊಲೆ ಮಾಡುವ ಬೆದರಿಕೆ ಒಡ್ಡಿದ್ದ. ಆ ಸಂದರ್ಭದಲ್ಲಿ ತಾನು ದಾವುದ್ ಇಬ್ರಾಹಿಂ ಗುಂಪಿನ ಸದಸ್ಯ ಎಂದು ಹೇಳಿದ್ದ.
ಎರಡನೇ ಸಲ 10 ಕೋಟಿ ರೂಪಾಯಿ ಪಾವತಿಗೆ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಅವರ ಕಚೇರಿಗೆ ಫೋನ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದು ಪ್ರಕರಣದ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.