ಮುಂಬೈ : ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಸರಕಾರ ಇದೀಗ ದೇಸಿ ಹಸುಗಳನ್ನು ರಾಜ್ಯಮಾತೆ- ಗೋಮಾತೆಯೆಂದು ಮಹತ್ವದ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಎನ್ಡಿಎ ಸರಕಾರ ಈ ಘೋಷಣೆ ಹೊರಡಿಸಿದೆ. ವೇದಗಳ ಕಾಲದಿಂದಲೂ ಹಸುಗಳು ಹೊಂದಿರುವ ಪ್ರಾಮುಖ್ಯತೆ ಪರಿಗಣಿಸಿ ಇದೀಗ ರಾಜ್ಯಮಾತೆ- ಗೋಮಾತೆ ಎಂದು ಘೋಷಣೆ ಮಾಡಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮಾನವನ ಪೋಷಣೆಯಲ್ಲಿ ದೇಸಿ ಹಸುಗಳ ಹಾಲಿನ ಪ್ರಾಮುಖ್ಯತೆ, ಆಯುರ್ವೇದ ಹಾಗೂ ಪಂಚಗವ್ಯ ಚಿಕಿತ್ಸೆ ಹಾಗೂ ಸಾವಯವ ಕೃಷಿಯಲ್ಲಿ ಹಸುವಿನ ಗೊಬ್ಬರದ ಬಳಕೆ ಮುಂತಾದ ಅಂಶ ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ದೇಸಿ ಹಸುಗಳು ರೈತರಿಗೆ ವರದಾನವಾಗಿವೆ. ಈ ಹಿನ್ನೆಲೆಯಲ್ಲಿ ಅವುಗಳಿಗಿರುವ ಪ್ರಾಮುಖ್ಯತೆ ಗಮನಿಸಿ ಮಹಾರಾಷ್ಟ್ರ ಸರಕಾರ ಇದೀಗ ಈ ಘೋಷಣೆ ಹೊರಡಿಸಿರುವುದಾಗಿ ಉಪಮುಖ್ಯಮಂತ್ರಿ ದೇವೇಂದ್ರ
ಫಡ್ನವಿಸ್ ತಿಳಿಸಿದ್ದಾರೆ. ಗೋ ಶಾಲೆಗಳಲ್ಲಿ ದೇಸಿ ಹಸುಗಳ ಉತ್ತೇಜನಕ್ಕೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.