ನವದೆಹಲಿ: ದೆಹಲಿ
ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರ ಸಂಜೆ 6 ಗಂಟೆಗೆ ಮುಕ್ತಾಯವಾಗಿದ್ದು, ವಿವಿಧ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ. ಈವರೆಗೂ ಸಮೀಕ್ಷೆಯ ಅಂಕಿ ಸಂಖ್ಯೆ ಪ್ರಕಟಿಸಿರುವ ಸಂಸ್ಥೆಗಳು ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಿವೆ.
ಹಾಲಿ ಅಧಿಕಾರದಲ್ಲಿರುವ ಆಮ್ ಆದ್ಮ ಪಕ್ಷ (ಎಎಪಿ) ಮೂರನೇ ಬಾರಿಗೆ ಗದ್ದುಗೆ ಏರಲು ಕಸರತ್ತು ನಡೆಸಿದೆ. ಎರಡು ದಶಕಗಳ ಬಳಿಕ ಅಧಿಕಾರ ಪಡೆಯಲು ಬಿಜೆಪಿ ಪ್ರಯಾಸಪಟ್ಟಿದೆ. ಎರಡು ಪಕ್ಷಗಳ ಪೈಪೋಟಿಯಲ್ಲಿ ಅಧಿಕಾರಕ್ಕೇರುವ ಕನಸನ್ನು ಕಾಂಗ್ರೆಸ್ ಕಾಣುತ್ತಿದೆ. ಹೀಗಾಗಿ ದೆಹಲಿಯಲ್ಲಿನ ತ್ರಿಕೋನ ಸ್ಪರ್ಧೆಯಲ್ಲಿ ಗದ್ದುಗೆ ಯಾರ ಪಾಲಾಗಲಿದೆ ಎಂಬುದರತ್ತ ಇಡೀ ದೇಶ ಕಣ್ಣಿಟ್ಟಿದೆ. ಬಹುಪಾಲು ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಯತ್ತ ತಮ್ಮ ಸಮೀಕ್ಷೆಯನ್ನು ನುಡಿದಿರುವುದು ವಿಶೇಷ.
25 ವರ್ಷಗಳ ನಂತರ ಬಿಜೆಪಿಯು ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಭವಿಷ್ಯ ನುಡಿದಿವೆ. ಆದರೆ ಅನೇಕ ಸಂದರ್ಭಗಳಲ್ಲಿ ಚುನಾವನೋತ್ತರ ಸಮೀಕ್ಷೆಗಳು ತಪ್ಪಾಗಿವೆ.
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಾದ್ಯಂತ ಬುಧವಾರ ನಡೆದ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6ರವರೆಗೆ ನಡೆಯಿತು. ಇದು ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ), ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಯಾಗಿದೆ.
ಹೆಚ್ಚು ಸ್ಥಾನಗಳನ್ನು ಗೆಲ್ಲುವ ಪಕ್ಷವು ದೆಹಲಿಯಲ್ಲಿ ಮುಂದಿನ ಸರ್ಕಾರವನ್ನು ರಚಿಸುತ್ತದೆ. ಚುನಾವಣಾ ಆಯೋಗವು ಫೆಬ್ರವರಿ 8 ರ ಶನಿವಾರ ಫಲಿತಾಂಶ ಪ್ರಕಟವಾಗಲಿದೆ.
ಎಬಿಪಿ ಮ್ಯಾಟ್ರಿಜ್ನ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕಿಂತ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿಗೆ 35-40 ಸ್ಥಾನಗಳು, ಎಎಪಿಗೆ 32-27 ಸ್ಥಾನಗಳು ಮತ್ತು ಕಾಂಗ್ರೆಸ್ಗೆ 0-1 ಸೀಟುಗಳು ಬರುತ್ತವೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಪೀಪಲ್ಸ್ ಪಲ್ಸ್ ಹಾಗೂ ಪೀಪಲ್ಸ್ ಇನ್ ಸೈಟ್ ಸಮೀಕ್ಷೆ ಪ್ರಕಾರ, ದೆಹಲಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆಯಿದೆ ಎಂದು ಹೇಳಿದೆ. ಪೀಪಲ್ಸ್ ಪಲ್ಸ್ 70 ಸ್ಥಾನಗಳಲ್ಲಿ ಬಿಜೆಪಿ 51 -60 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದರೆ ಎಎಪಿ 10-19 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಪೀಪಲ್ಸ್ ಇನ್ ಸೈಟ್ ಬಿಜೆಪಿಯು 40-44 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.
ಡಿವಿ ರಿಸರ್ಚ್ ಸಮೀಕ್ಷೆ ಪ್ರಕಾರ, ಬಿಜೆಪಿ 36-44, ಎಎಪಿ 26-34 ಗೆಲ್ಲಬಹುದು ಎಂದು ಅಂದಾಜಿಸಿದೆ. ಟೈಮ್ಸ್ ನೌ ಜೆವಿಸಿ ಚುನಾವಣೋತ್ತರ ಸಮೀಕ್ಷೆಯು ಬಿಜೆಪಿ 39-45, ಎಎಪಿ 22-31 ಹಾಗೂ ಕಾಂಗ್ರೆಸ್ 0-2 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.
ಪಿಎಂಮಾರ್ಕ್ ಸಮೀಕ್ಷೆಯು ಬಿಜೆಪಿಗೆ 39-49 ಸ್ಥಾನಗಳ ಗೆಲ್ಲಬಹುದು ಎಂದು ಅಂದಾಜಿಸಿದೆ. ಇದೇವೇಳೆ ಅದು ಎಎಪಿ 21-31 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿದೆ.