ಜನ ಜೀವಾಳ ಜಾಲ ಬೆಳಗಾವಿ :ಬೆಳಗಾವಿ ನಗರದ ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತರಿಗೇ ಬಿಜೆಪಿ ಟಿಕೇಟ್ ನೀಡಬೇಕು ಎಂದು ಲಿಂಗಾಯತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಇಂದು ನಗರದ ನಾಗನೂರು ಮಠದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಲಿಂಗಾಯತ ಸಮಾಜದ ಬಹುಪಾಲು ಸಮುದಾಯಗಳು ಭಾಗವಹಿಸಿದ್ದವು.
ಕಳೆದ ಒಂದು ದಶಕದಿಂದಲೂ ಲಿಂಗಾಯತರಿಗೆ ಟಿಕೇಟ್ ನೀಡುವ ಆಸೆ ಹುಟ್ಟಿಸಿ ಬಿಜೆಪಿ ಪಕ್ಷ ಕಾಲ ಕಳೆದಿದೆ. ಸದ್ಯ ಕಾಲ ಸರಿ ಕೂಡಿ ಬಂದಿದ್ದು ಬೆಳಗಾವಿಯ ಉತ್ತರ- ದಕ್ಷಿಣ ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತರಿಗೇ ವಿಧಾನಸಭೆ ಟಿಕೇಟ್ ಕೊಡುವಂತೆ ಆಗ್ರಹಿಸಲಾಗಿದೆ.
ಸಮಾಜ ಸೇವಕರು, ನಗರದ ಹಿರಿಯ ವೈದ್ಯರಾದ ಬಿಜೆಪಿಯ ಹಿರಿಯ ಸದಸ್ಯ ಡಾ. ರವಿ ಪಾಟೀಲ ಅಥವಾ ಮಾಜಿ ಬುಡಾ ಅಧ್ಯಕ್ಷ ಘೂಳಪ್ಪಾ ಹೊಸಮನಿ ಹಾಗೂ ದಕ್ಷಿಣಕ್ಕೆ ಅಡ್ವೋಕೇಟ್ ಮುರುಘೇಂದ್ರ ಪಾಟೀಲ ಅವರಿಗೆ ಟಿಕೇಟ್ ನೀಡಲೆಬೇಕು, ಇಲ್ಲದಿದ್ದರೆ ಲಿಂಗಾಯತರು ಪರ್ಯಾಯ ಮಾರ್ಗ ತುಳಿಯಬೇಕಾಗುತ್ತದೆ ಎಂದು ಲಿಂಗಾಯತ ನಾಯಕರು ಇಂದಿನ ಸಭೆಯಲ್ಲಿ ಎಚ್ಚರಿಸಿದ್ದಾರೆ.
ಬಿಜೆಪಿ ಪಕ್ಷದ ಟಿಕೇಟ್ ಪಡೆದು ಅಧಿಕಾರ ಅನುಭವಿಸಿರುವ ನಗರದ ಶಾಸಕರು ಹೊಸ ಮುಖಗಳಿಗೆ ಸ್ಥಾನ ಬಿಟ್ಟುಕೊಡಬೇಕು ಎಂದು ಆಗ್ರಹಿಸಲಾಗಿದೆ. ಬಿಜೆಪಿ ಕೇಅಮದ್ರ ಸಮಿತಿ ಟಿಕೇಟ್ ಘೋಷಿಸುವ ಮುನ್ನ ಲಿಂಗಾಯತರ ಈ ನಿರ್ಧಾರ ಗಮನಕ್ಕೆ ತೆಗೆದುಕೊಳ್ಳದಿದ್ದರೆ ಪರ್ಯಾಯ ಹೆಜ್ಜೆ ಇಡುವುದಾಗಿ ಎಚ್ಚರಿಸಿದೆ.
ಅಡ್ವೋಕೇಟ್ ಹಾಗೂ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಸುಜೀತ್ ಮುಳಗುಂದ , ವೀರಶೈವ ಮಹಾಸಭಾದ, ರತ್ನಪ್ರಭಾ ಬೆಲ್ಲದ, ಅಶೋಕ ಮಳಗಲಿ, ಶಂಕರ ಗುಡಸ, ಎ. ವೈ. ಬೆಂಡಿಗೇರಿ, ಅಶೋಕ ಬೆಂಡಿಗೇರಿ, ಮಹಾಂತೇಷ ಗುಡಸ, ಶಶಿ ಪಾಟೀಲ, ಈರಣ್ಣ ದೇಯನ್ನವರ ಇತರರು ಉಪಸ್ಥಿತರಿದ್ದರು.