ನವದೆಹಲಿ: ಲೋಕಸಭೆಯ ನೂತನ ಸ್ಪೀಕರ್ ಆಯ್ಕೆ ಜೂನ್ 26ರಂದು ನಡೆಯಲಿದೆ. ಅಭ್ಯರ್ಥಿಯನ್ನು ಬೆಂಬಲಿಸುವ ಪತ್ರವನ್ನು ಜೂನ್ 25ರ ಮಧ್ಯಾಹ್ನ 12ರೊಳಗೆ ಸಲ್ಲಿಸಬೇಕು ಎಂದು ಲೋಕಸಭಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
18ನೇ ಲೋಕಸಭೆಯ ಮೊದಲ ಸಭೆ ಜೂನ್ 24ರಿಂದ ಆರಂಭಗೊಳ್ಳಲಿದೆ. ಈ ಅಧಿವೇಶನವು ಜಲೈ 3ಕ್ಕೆ ಕೊನೆಗೊಳ್ಳಲಿದೆ.
ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಿದವರ ಪರವಾಗಿ ಬೆಂಬಲ ವ್ಯಕ್ತಪಡಿಸುವವರು ಚುನಾವಣೆ ನಡೆಯುವ ದಿನ ಮಧ್ಯಾಹ್ನ 12ರೊಳಗೆ ಸೆಕ್ರೇಟರಿ ಜನರಲ್ಗೆ ಲಿಖಿತ ರೂಪದಲ್ಲಿ ನೀಡುವುದು ವಾಡಿಕೆ. ಆದರೆ ಈ ಬಾರಿ ಒಂದು ದಿನ ಮುಂಚಿತವಾಗಿ, ಅಂದರೆ ಜೂನ್ 25ರಂದು ಮಧ್ಯಾಹ್ನ 12ರೊಳಗೆ ನೀಡಬೇಕು ಎಂದು ತಿಳಿಸಲಾಗಿದೆ.
‘ಜೂನ್ 24 ಹಾಗೂ 25ರಂದು ನೂತನ ಸಂಸದರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಸ್ಪೀಕರ್ ಆಯ್ಕೆ 26ರಂದು ನಡೆಯಲಿದೆ. ಜೂನ್ 27ರಂದು ರಾಷ್ಟ್ರಪತಿ ದೌಪದಿ ಮುರ್ಮು ಅವರು ಲೋಕಸಭೆ ಹಾಗೂ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.