ಲಖನೌ: ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂದೇ ಖ್ಯಾತಿಯಾದ ಮಹಾಕುಂಭ ಮೇಳಕ್ಕೆ ನಾಳೆ ಮಹಾಶಿವರಾತ್ರಿಯಂದು ತೆರೆ ಬೀಳಲಿದೆ.
ಬುಧವಾರ ಸಂಗಮದಲ್ಲಿ ಕೊನೆಯ ಅಮೃತ ಸ್ನಾನ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮಹಾಶಿವರಾತ್ರಿಯಂದು ಲಕ್ಷಗಟ್ಟಲೆ ಭಕ್ತರು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಬರುವ ನಿರೀಕ್ಷೆಯಿದೆ. ಈಗಾಗಲೇ ಸಾವಿರಾರು ಜನರು ಪ್ರಯಾಗ್ರಾಜ್ನತ್ತ ಬರುತ್ತಿದ್ದಾರೆ.
ಹೊರರಾಜ್ಯಗಳಿಂದ ಭಕ್ತರನ್ನು ಕರೆತರುವ ವಾಹನಗಳಿಗೆ ಪ್ರಯಾಗ್ರಾಜ್ ನಗರಕ್ಕೆ ಬರದಂತೆ ನಿರ್ಬಂಧಿಸಲಾಗಿದ್ದು, ನಿಗದಿಪಡಿಸಿದ ಸ್ಥಳದಲ್ಲೇ ವಾಹನ ನಿಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಂಗಮದ ಹೊರತಾಗಿ ಘಾಟ್ಗಳಲ್ಲಿಯೂ ಸ್ನಾನ ಮಾಡಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಜನರ ನಿಯಂತ್ರಣ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆವಹಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಶೀಲನೆ ನಡೆಸಿದ್ದಾರೆ. ಪ್ರಯಾಗ್ರಾಜ್ನಲ್ಲಿ ಯಾವುದೇ ಟ್ರಾಫಿಕ್ ಜಾಮ್ ಆಗದಂತೆ ಮತ್ತು ಜನರಿಗೆ ಮೇಳಕ್ಕೆ ತಲುಪಲು ಸುಗಮವಾಗುವಂತೆ ಸಿದ್ಧತೆ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ.