ಉಡುಪಿ : ದೇಶದ ಹದಿಮೂರು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ಆರೋಪಿಯೊಬ್ಬ ಉಡುಪಿ ಜಿಲ್ಲೆ ಕೋಟ ಪೊಲೀಸರಿಗೆ ಈಗ ಅತಿಥಿಯಾಗಿದ್ದಾನೆ.
ಈತನ ಕಥೆ ಕೇಳಿ ಸ್ವತಃ ಪೊಲೀಸರೇ ಅಚ್ಚರಿಗೊಳಗಾಗಿದ್ದಾರೆ. ಬಂಧನದ ನಂತರ ಪೊಲೀಸರು ಈತನ ವಿಚಾರಣೆ ನಡೆಸಿದಾಗ ನನ್ನ ಬಗ್ಗೆ ಮಾಹಿತಿ ನಿಮಗೆ ಬೇಕಾದರೆ ಯೂಟ್ಯೂಬ್ ನಲ್ಲಿ ಮಹಮ್ಮದ್ ಇರ್ಫಾನ್ ರೋಬಿನ್ ಹುಡ್ ಎಂದು ಹುಡುಕಿ ಎಂದಿದ್ದಾನೆ. ಆಗ ಪೊಲೀಸರು ಹುಡುಕಿದಾಗ ಇವನ ಬಗ್ಗೆ ಹತ್ತಾರು ವಿಡಿಯೋಗಳು ಲಭಿಸಿವೆ. ಅದರಲ್ಲಿ ಆತ ಕಳ್ಳತನ ಮತ್ತು ಕೋಟ್ಯಂತರ ರೂಪಾಯಿ ಹಣವನ್ನು ಜನರಿಗೆ ಹಂಚುವ ವಿಚಾರಗಳಿದ್ದು ಇದರಿಂದ ಪೊಲೀಸರು ಅಚ್ಚರಿಗೊಳಗಾಗಿದ್ದಾರೆ. ಆದರೆ ಈತ ಸಮಾಜ ಸೇವೆ ಹೆಸರಿನಲ್ಲಿ ದೇಶದ 13 ರಾಜ್ಯಗಳಲ್ಲಿ ವಂಚನೆ ನಡೆಸಿರುವುದು ವಿಚಾರಣೆ ಕಾಲಕ್ಕೆ ಬಯಲಾಗಿದೆ. ಕೇರಳದಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣವನ್ನು ಕಳ್ಳತನ ಮಾಡಿ ಬಿಹಾರಕ್ಕೆ ಹೋಗಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ಬಿಹಾರದ ಮಹಮ್ಮದ್ ಇರ್ಫಾನನ್ನು ಬ್ರಹ್ಮಾವರ ಪೊಲೀಸರು ಕೋಟ ಮೂರುಕೈ ಎಂಬಲ್ಲಿ ಶನಿವಾರ ರಾತ್ರಿ ಬಂಧಿಸಿದ್ದಾರೆ. ಈತನ ಮೇಲೆ 13 ರಾಜ್ಯಗಳಲ್ಲಿ ಕಳ್ಳತನ ಮಾಡಿರುವ ಆರೋಪಗಳಿದ್ದು ಕೆಲ ಕುತೂಹಲಕಾರಿ ಅಂಶಗಳು ಇದೀಗ ಪೊಲೀಸರಿಗೆ ಗೊತ್ತಾಗಿವೆ. ಈತ ಹಲವು ಬಾರಿ ಪೊಲೀಸರ ವಶವಾಗಿದ್ದ. ಪ್ರಮುಖವಾಗಿ ಸಿನಿಮಾ ತಾರೆಯರು, ರಾಜಕಾರಣಿಗಳು ಸೇರಿದಂತೆ ಅತ್ಯಂತ ಶ್ರೀಮಂತರ ಮನೆಗಳ ಮೇಲೆ ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ. ಒಮ್ಮೆ ಕಣ್ಣಿಟ್ಟರೆ ಬಿಡುತ್ತಿರಲಿಲ್ಲ, ಎಷ್ಟೇ ದಿನವಾದರೂ ಕಾದು ತನ್ನ ಚಾಕಚಕ್ಯತೆ ತೋರುತ್ತಿದ್ದ. ಬಹುತೇಕ ಹೆಚ್ಚಿನ ಸಲ ಒಬ್ಬನೇ ಪ್ರಕರಣದಲ್ಲಿ ಭಾಗಿಯಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚುತ್ತಿದ್ದ. ದಕ್ಷಿಣ ಭಾರತದ ಜನ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಬಳಸುತ್ತಾರೆ. ಹೀಗಾಗಿ ಕರ್ನಾಟಕ, ಕೇರಳ, ಗೋವಾ ಮುಂತಾದ ದಕ್ಷಿಣ ಭಾರತದ ರಾಜ್ಯಗಳೆ ಈತನ ಕಾರಸ್ಥಾನವಾಗಿತ್ತು.
ಈತ ಮೊದಲ ಬಾರಿಗೆ ತನ್ನ 22ನೇ ವಯಸ್ಸಿನಲ್ಲಿ ಸಹೋದರಿಯ ಮದುವೆಯ ಖರ್ಚಿಗೆ ಕಳ್ಳತನ ಮಾಡಿದ್ದ. ನಂತರದ ದಿನಗಳಲ್ಲಿ ಕಳ್ಳತನ ಮಾಡಿ ಅದರಲ್ಲಿ ಸ್ವಲ್ಪ ತಾನು ಇರಿಸಿಕೊಂಡು ಉಳಿದ ಹಣವನ್ನು ಊರಿನವರ ಮದುವೆ, ಅನಾರೋಗ್ಯ ಸೇರಿದಂತೆ ಊರಿನ ಅಭಿವೃದ್ಧಿಗೆ ಹಂಚುತ್ತಿದ್ದನಂತೆ. ಆದ್ದರಿಂದ ಊರಿನವರು ಈತನನ್ನು ರೋಬಿನ್ ಹುಡ್ ಎಂದೇ ಗುರುತಿಸಿದ್ದರು. ಊರಿನವರಿಗೆ ಇವನ ಮೇಲೆ ಅಪರಿಮಿತ ಪ್ರೀತಿ. ಈ ಕಾರಣದಿಂದ ಇವನ ಪತ್ನಿ ಒಮ್ಮೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಳು .ಈತ ಜೈಲು ಸೇರಿದರೂ ಊರಿನವರೇ ಈತನನ್ನು ಜಾಮೀನು ನೀಡಿ ಬಿಡಿಸಿಕೊಂಡು ಬರುತ್ತಿದ್ದರು ಎಂಬ ಕುತೂಹಲಕಾರಿ ಸಂಗತಿ ಗೊತ್ತಾಗಿದೆ.