ಬೆಳಗಾವಿ :
ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಎಂಇಎಸ್ ನ ಮಾಜಿ ಮೇಯರ್ ವಿಜಯ ಮೋರೆ ಹುನ್ನಾರ ನಡೆಸಿರುವುದು ಇದೀಗ ಬೆಳಕಿಗೆ ಬಂದಿದೆ. ಇದರ ವಿರುದ್ಧ ಕನ್ನಡಿಗರು ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ.
2006 ರಲ್ಲಿ ವಿಜಯ ಮೋರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್ ಮೇಯರ್ ಆಗಿ ಆಯ್ಕೆಯಾಗಿದ್ದರು. ಅವರು ಮೇಯರ್ ಆಗಿ ಆಯ್ಕೆಯಾಗಲು ಆಗಿ ಆಗಿನ ಕನ್ನಡಿಗ ನಗರಸೇವಕರು ಸಹಕರಿಸಿದ್ದರು. ಆದರೆ, ಮೇಯರ್ ಆಗಿ ಆಯ್ಕೆ ಆದ ನಂತರ ಅವರ ಸಂಪೂರ್ಣ ವರಸೆ ಬದಲಾಗಿತ್ತು!
ಮೇಯರ್ ಆಗಿ ಸಂಪೂರ್ಣ ಮಹಾರಾಷ್ಟ್ರ ಪರ ಲಾಬಿ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ಬೆಳಗಾವಿ ಸಹಿತ ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಮಹಾನಗರ ಪಾಲಿಕೆಯಲ್ಲಿ ಠರಾವ್ ಅಂಗೀಕರಿಸಿದ್ದರು. ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳಿಗೆ ಮರೆತೇ ಹೋಗಿದ್ದ ಗಡಿ ವಿವಾದಕ್ಕೆ ಮತ್ತೆ ಬೆಂಕಿ ಹಚ್ಚಲು ನೇರ ಕಾರಣರಾಗಿದ್ದರು.
ವಿಜಯ ಮೋರೆ ಕನ್ನಡನಾಡಿನ ವಿರುದ್ಧ ತೆಗೆದುಕೊಂಡಿದ್ದ ನಿರ್ಧಾರದ ವಿರುದ್ದ ಕರ್ನಾಟಕದಲ್ಲಿ ತೀವ್ರ ಪ್ರತಿಭಟನೆ ನಡೆದಿತ್ತು. ಗಡಿ ವಿವಾದ ಮತ್ತೆ ಭುಗಿಲೇಳಲು ಕಾರಣವಾಗಿತ್ತು. ಅದೇ ಸಮಯದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಹೋಗಿದ್ದ ವಿಜಯ ಮೋರೆ ಅವರಿಗೆ ಕನ್ನಡಪರ ಸಂಘಟನೆಗಳು ಮುಖಕ್ಕೆ ಮಸಿ ಬಳಿದು ಸೇಡು ತೀರಿಸಿಕೊಂಡಿದ್ದವು. ಈ ಘಟನೆ ನಂತರ ಗಡಿ ವಿವಾದ ಮತ್ತಷ್ಟು ಕಾವೇರುವಂತಾಯಿತು. ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಬಿಗುವಿನ ವಾತಾವರಣ ಮೂಡಿತು. ಒಟ್ಟಾರೆ, ವಿಜಯ ಮೋರೆ ಅಂದು ತೆಗೆದುಕೊಂಡು ಕನ್ನಡ ವಿರೋಧಿ ನಿಲುವು ಕರ್ನಾಟಕದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಅವರು ಸಮಾಜ ಸೇವೆಯ ಮುಖವಾಡ ಹೊತ್ತು ಬಿಜೆಪಿಯಿಂದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ತೆರೆಮರೆಯಲ್ಲಿ ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ. ಇದರಿಂದ ಬೆಳಗಾವಿಯ ಕನ್ನಡ ಸಂಘಟನೆಗಳು ಬಿಜೆಪಿ ವಿರುದ್ಧ ಸಿಡಿದೆದ್ದಿವೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಅಭ್ಯರ್ಥಿ ಆಗಲು ಸ್ವತಹ ವಿಜಯ ಮೋರೆ ಅವರೇ ಪ್ರಯತ್ನಿಸಿರುವುದು ಗಮನಾರ್ಹ. ಆದರೆ, ಅವರು ಬಿಜೆಪಿಯೇ ತಮಗೆ ಸಮಾಜ ಸೇವೆಯ ಹಿನ್ನೆಲೆಯಲ್ಲಿ ಟಿಕೆಟ್ ನೀಡಲು ಮುಂದಾಗಿದೆ ಎಂಬಂತೆ ಮರಾಠಿ ಭಾಷಿಕರ ಮುಂದೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಪ್ರಚಾರ ಪಡೆಯಲು ಮುಂದಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪಕ್ಷ ಮತ್ತೆ ಟಿಕೆಟ್ ನೀಡಿದೆ. ಆದರೆ, ಅವರನ್ನು ಎದುರಿಸಲು ಬಿಜೆಪಿ ಪರದಾಡುತ್ತಿದೆ. ಸಮರ್ಥ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ. ಒಂದು ವೇಳೆ ವಿಜಯ ಮೋರೆ ಅವರಿಗೆ ಬಿಜೆಪಿ ಮಣೆ ಹಾಕಿ ಅವರಿಗೆ ಟಿಕೆಟ್ ನೀಡಿದರೆ ಕರ್ನಾಟಕದಲ್ಲಿ ಬಿಜೆಪಿಗೆ ವ್ಯತಿರಿಕ್ತ ಪರಿಣಾಮ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಬೆಳಗಾವಿ ಸೇರಿದಂತೆ ಗಡಿಭಾಗದಲ್ಲಿ ಭದ್ರವಾಗಿರುವ ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಳ್ಳಲು ಕನ್ನಡ ವಿರೋಧಿ ನಿಲ್ಲುವನ್ನು ಹೊಂದಿರುವ ವಿಜಯ ಮೋರೆ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎನ್ನುವುದು ಕನ್ನಡ ಸಂಘಟನೆಗಳ ಆಗ್ರಹವಾಗಿದೆ. ಒಂದು ವೇಳೆ ವಿಜಯ ಮೋರೆ ಶಾಸಕರಾಗಿ ಆಯ್ಕೆಯಾದರೆ, ಕರ್ನಾಟಕ ವಿಧಾನಸಭೆಯಲ್ಲಿ ಎಂಇಎಸ್ ಶಾಸಕರಿಂದ ಮೊಳಗುತ್ತಿದ್ದ ಮಹಾರಾಷ್ಟ್ರ ಪರ ಕೂಗು ಮತ್ತೆ ಜೀವಂತ ಪಡೆಯಬಹುದು. ಈ ನಿಟ್ಟಿನಲ್ಲಿ ವಿಜಯ ಮೋರೆ ಅವರಿಗೆ ಯಾವುದೇ ಕಾರಣಕ್ಕೆ ಬಿಜೆಪಿ ಟಿಕೆಟ್ ನೀಡಬಾರದು ಎಂದು ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.