ಬೆಂಗಳೂರು: ಅಪರ್ಣಾ ಇಷ್ಟು ಬೇಗ ಸಾವಿನ ಮನೆಯ ಕದ ತಟ್ಟಬಾರದಿತ್ತು. ಹೀಗೆಂದು ಕಂಬನಿ ಮಿಡಿದಿರುವುದು ಕನ್ನಡ ನಾಡ ಜನತೆ. ಕೊನೆಗೂ ಎರಡು ವರ್ಷಗಳ ಕಾಲ ತಮಗೆ ಕಾಡಿದ್ದ ಕ್ಯಾನ್ಸರ್ ಜೊತೆ ಹೋರಾಡಿ ಅವರು ಕೊನೆಯುಸಿರು ಎಳೆದಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟಿ, ನಿರೂಪಕಿ ಅಪರ್ಣಾ (51) ಗುರುವಾರ (ಜುಲೈ 11) ನಿಧನರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ವಿವಾಹವಾಗಿದ್ದರು. ಬೆಂಗಳೂರು ದೂರದರ್ಶನದಲ್ಲಿ ಮಸಣದ ಹೂವು, ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲೂ ಅಪರ್ಣಾ ನಟಿಸಿದ್ದರು. ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಸೃಜನ್ ಲೋಕೇಶ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿಯಾಗಿ ಎಲ್ಲರ ಮನಗೆದ್ದಿದ್ದರು. ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಟಿವಿ ಶೋಗಳನ್ನು ನಡೆಸಿದ್ದ ಅವರು ಜನಪ್ರಿಯ ಧಾರಾವಾಹಿ ‘ಮುಕ್ತ’ದಲ್ಲಿ ಶೀಲಾ ಪ್ರಸಾದ ಪಾತ್ರದ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದರು. ಅಂಕಣಗಾರ್ತಿಯಾಗಿಯೂ ಜನಪ್ರಿಯರಾಗಿದ್ದರು. 2013 ರಲ್ಲಿ ಬಿಗ್ ಬಾಸ್ ಶೋ ನಲ್ಲಿಯೂ ಭಾಗವಹಿಸಿದ್ದರು. ನಮ್ಮ ಮೆಟ್ರೋ ಅನೌನ್ಸ್ಮೆಂಟ್ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಅವರು ಧ್ವನಿ ನೀಡಿದ್ದರು.
ಅಪರ್ಣಾ ವಿಧಿವಶರಾದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ನಾಗರಾಜ್ ವಸ್ತಾರೆ, ತುಂಬಾ ಖಾಸಗಿಯಾಗಿ ಬದುಕಿದವಳು ಅಪರ್ಣಾ, ಅಷ್ಟೇ ಖಾಸಗಿಯಾಗಿ ಬೀಳ್ಕೊಡಲು ಬಯಸುತ್ತೇನೆ. ಅವಳು ನನಗೆ ಸಲ್ಲೋದಕ್ಕೆ ಮುಂಚೇನೇ ಕರ್ನಾಟಕಕ್ಕೆ ಸೇರಿದವಳು. ಮಾಧ್ಯಮದವರ ಮುಂದೆಯೇ ನಿಂತು ಏನಾಯ್ತು ಅಂತಾ ಹೇಳಬೇಕು ಅನ್ನೋದು ಅವಳ ಆಸೆಯಾಗಿತ್ತು. ಅಷ್ಟನ್ನೇ ನಾನು ಹೇಳ್ತಿದ್ದೀನಿ ಎಂದರು.
ಎರಡು ವರ್ಷಗಳ ಹಿಂದೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ತಪಾಸಣೆಯಲ್ಲಿ ಗೊತ್ತಾಯ್ತು. ಅದಾಗಲೇ ನಾಲ್ಕನೇ ಹಂತದಲ್ಲಿತ್ತು. ಮೊದಲು ನೋಡಿದಾಗ ವೈದ್ಯರು ಇನ್ನೂ 6 ತಿಂಗಳು ಬದುಕಿದರೆ ಹೆಚ್ಚು ಎಂದು ಹೇಳಿದ್ದರು. ಆದ್ರೆ ಅವಳು ಛಲಗಾತಿ, ಏನಾದರೂ ಗೆದ್ದೇ ಗೆಲ್ಲುತ್ತೇನೆ ಅನ್ನುವ ಛಲವಿತ್ತು. ಅದಾದ ಮೇಲೂ ಒಂದೂವರೆ ವರ್ಷ ಹೋರಾಡಿದಳು. ಆದ್ರೆ ಕಳೆದ ಫೆಬ್ರವರಿ ತಿಂಗಳಿನಿಂದ ಸೋತಿದ್ದಳು. ಏಕೆಂದರೆ ಇದು ದೇಹವೇ ದೇಹವನ್ನು ಬಾಧಿಸುವ ವ್ಯಾಧಿ, ನಾನು ಅರಿತಿರುವ ಹಾಗೆಯೇ ಕ್ಯಾನ್ಸರ್ ಅನ್ನೋದು ನೀನಲ್ಲದ ಇನ್ನೊಂದು ವ್ಯಕ್ತಿತ್ವವನ್ನು ಹೇರಲು ಬಯಸುತ್ತೆ. ಅವಳು ಧೀರೆ, ಇಷ್ಟು ವರ್ಷ ಸಾಧ್ಯವಾದಷ್ಟೂ ಮಣಿಸಿದಳು. ಆದರೀಗ ನಾವಿಬ್ಬರೂ ಜಂಟಿಯಾಗಿ ಸೋತಿದ್ದೇವೆ ಎಂದು ಕಣ್ಣೀರಿಟ್ಟರು.
ಅಕ್ಟೋಬರ್ಗೆ 58 ವರ್ಷ ತುಂಬುತ್ತಿತ್ತು. ಅವಳ
ದೇಹ ಅನ್ನೋದು ಮಾಯಕ ಅನ್ನೋದು ತೋರುತ್ತದೆ. ಏಕೆಂದರೆ ನಿಜವಾದ ವಯಸ್ಸನ್ನು ಯಾವತ್ತೂ ತೋರಿಸಲಿಲ್ಲ. 9:30ರ ಹೊತ್ತಿನಲ್ಲಿ ದೇಹ ತನ್ನನ್ನು ತಾನು ಹಿಂಪಡೆದುಕೊಂಡಿತು ಎಂದು ಭಾವುಕರಾದರು.