ಆಚಾರ್ಯ ಶ್ರೀ ಕಾಮಕುಮಾರನಂದಿ ಹತ್ಯೆ ನಡೆದ ಹಿನ್ನಲೆಯಲ್ಲಿ ಇಂದು ಬೆಳಗಾವಿಯ ಹಲಗಾ ಬಳಿಯ ಸುವರ್ಣಸೌಧ ಎದುರು ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿಗಳ ನೇತೃತ್ವದಲ್ಲಿ ಜೈನ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬೆಳಗಾವಿ :
ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಆಚಾರ್ಯ ಶ್ರೀ ಕಾಮಕುಮಾರನಂದಿ ಮಹಾರಾಜರ ಹತ್ಯೆ ನಡೆದ ಹಿನ್ನಲೆಯಲ್ಲಿ ಇಂದು ಬೆಳಗಾವಿಯ ಹಲಗಾ ಬಳಿಯ ಸುವರ್ಣಸೌಧ ಎದುರು ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿಗಳ ನೇತೃತ್ವದಲ್ಲಿ ಜೈನ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ಜೈನ ಮುನಿಗಳಿಗೆ ರಕ್ಷಣೆ ನೀಡಬೇಕು ಹಾಗೂ ಹತ್ಯೆ ಮಾಡಿದ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ರವಿರಾಜ ಪಾಟೀಲ ಅವರು, ಸ್ವಾಮೀಜಿಗಳ ಹತ್ಯೆ ಇದೊಂದು ಅನಾಗರಿಕ ಹತ್ಯೆಯಾಗಿದೆ. ಮನುಷ್ಯತ್ವವಿಲ್ಲದ ವ್ಯಕ್ತಿ ಈ ರೀತಿ ಕೃತ್ಯ ಎಸಗಲು ಸಾಧ್ಯ. ಈ ಘಟನೆಯನ್ನು ಜೈನ ಸಮಾಜ ಖಂಡಿಸುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಜೈನ ಮುನಿಗಳು ಸರ್ವಸ್ವವನ್ನು ತ್ಯಾಗ ಮಾಡಿ ಮುನಿಗಳಾಗಿರುತ್ತಾರೆ. ಅವರಿಗೆ ಯಾವುದೇ ಮೋಹ ಇರುವುದಿಲ್ಲ. ಇಂತಹ ತ್ಯಾಗಿಗಳ ಹತ್ಯೆ ಮಾಡಿರುವುದು ಜೈನ ಸಮಾಜಕ್ಕೆ ಘಾಸಿಯನ್ನುಂಟು ಮಾಡಿದೆ. ಒಂದು ಸಣ್ಣ ಇರುವೆಗೂ ಕೆಟ್ಟದನ್ನು ಬಯಸದ ಮುನಿಗಳು ಯಾರಿಗೂ ಕೇಡು ಬಯಸಲಾರರು. ಆದರೆ ಇಂತಹ ತ್ಯಾಗಿಗಳ ಹತ್ಯೆ ಮಾಡಿರುವುದು ಖಂಡನೀಯ ಎಂದು ಹೇಳಿದರು.
ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿಗಳು ಮಾತನಾಡಿ, ಈ ಪ್ರತಿಭಟನೆ ಯಾವುದೇ ಪಕ್ಷ, ಯಾವುದೇ ಸರಕಾರದ ವಿರುದ್ದ ಅಲ್ಲ. ಜೈನ ಮುನಿಗಳ ಹತ್ಯೆಯಿಂದಾಗಿ ಇಂದು ಜೈನ ಮುನಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇದೇ ರೀತಿ ಮುಂದುವರಿದರೆ ಜೈನ ಮುನಿಗಳಿಗೆ ಉಳಿಗಾಲವಿಲ್ಲ. ಹಾಗಾಗಿ ಸರಕಾರ ಜೈನ ತೀರ್ಥಕ್ಷೇತ್ರಗಳು ಮತ್ತು ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ನೀಡಬೇಕೆಂದು ಅವರು ಆಗ್ರಹಿಸಿದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಜೈನ ಮುನಿಗಳು ಕೇವಲ ಧರ್ಮ ಪ್ರಚಾರ ಧರ್ಮ ಸಭೆಗಳನ್ನು ನಡೆಸುತ್ತಾರೆ. ಆದರೆ ಯಾವುದೇ ರೀತಿಯ ಹಣದ ವ್ಯವಹಾರ ಮಾಡುವುದಿಲ್ಲ. ಪೋಲಿಸ್ ಇಲಾಖೆಯವರು ಹಣದ ವ್ಯವಹಾರದಲ್ಲಿ ಕೊಲೆಯಾಗಿದೆ ಎಂದು ಹೇಳುವ ಮೂಲಕ ಜೈನ ಸಮಾಜಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುವಂತಿದೆ. ಇದಕ್ಕೆ ಪೋಲಿಸ್ ಇಲಾಖೆ ಮೇಲೆ ಒತ್ತಡ ಇದ್ದ ಹಾಗೆ ಕಾಣುತ್ತದೆ. ಆದ್ದರಿಂದ ಈ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
ಅನೇಕ ಹಿರಿಯರು ಮಾತನಾಡಿದರು. ಹಲಗಾ, ಬಸ್ತವಾಡ, ಅಲಾರವಾಡ, ಬೆಳಗಾವಿ ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.