ಬೆಳಗಾವಿ :ಮೂಡಲಗಿ ತಾಲೂಕು ವಡೇರಟ್ಟಿ ಗ್ರಾಮದಲ್ಲಿ ಸೋಮವಾರ ವ್ಯಕ್ತಿಯೊಬ್ಬರ ಹತ್ಯೆಗೆ ಇಡೀ ಗ್ರಾಮವನ್ನೇ ತಲ್ಲಣಗೊಳಿಸಿದೆ. ಭೀಮನ ಅಮಾವಾಸ್ಯೆಯಾದ ಸೋಮವಾರ ಗಂಡನ ಪೂಜೆ ಮಾಡಿದರೆ ಆತನ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಅದೇ ದಿನ ಹೆಂಡತಿಯೊಬ್ಬಳು ದೇವಸ್ಥಾನಕ್ಕೆ ಬಂದಿದ್ದ ಗಂಡನ ಹತ್ಯೆ ಮಾಡುವ ಬಗ್ಗೆ ಹಂತಕರಿಗೆ ಮಾಹಿತಿ ನೀಡಿದ ಘಟನೆ ಇದೀಗ ಬಯಲಾಗಿದೆ.ವಡೇರಟ್ಟಿ ಗ್ರಾಮದ ಶಂಕರ ಸಿದ್ದಪ್ಪ ಜಗಮುತ್ತಿ (25) ಕೊಲೆಯಾದವ.
ಹತ್ಯೆಗೀಡಾದ ಶಂಕರ ಜಗಮುತ್ತಿ ಪತ್ನಿ ಸಿದ್ದವ್ವ ಆಲಿಯಾಸ್ ಪ್ರಿಯಾಂಕಾ ಜಗಮುತ್ತಿ ( 21 ) ಮತ್ತು ಆಕೆಯ ಸ್ನೇಹಿತ ಬೈರನಟ್ಟಿ ಗ್ರಾಮದ ಶ್ರೀಧರ ತಳವಾರ (22) ಘಟನೆಯ ಹಿಂದಿನ ಸೂತ್ರಧಾರರು.

ಅಮಾವಾಸ್ಯೆ ಪೂಜೆಗೆ ವಡೇರಟ್ಟಿ ಬನಸಿದ್ದೇಶ್ವರ ದೇವಸ್ಥಾನಕ್ಕೆ ಪತ್ನಿ ಸಿದ್ದವ್ವ(ಪ್ರಿಯಾಂಕಾ) ಜೊತೆಗೆ ಶಂಕರ ಬಂದಿದ್ದ. ದೇವರ ದರ್ಶನ ಪಡೆದ ನಂತರ ವಾಪಸ್ ಹೋಗುತ್ತಿದ್ದ ವೇಳೆ ದೇವಸ್ಥಾನದ ಬಳಿ ಶ್ರೀಧರ ತಳವಾರ ಲಾಂಗ್ ನಿಂದ ಆತನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಪೊಲೀಸರು ಶ್ರೀಧರ ತಳವಾರ ಮತ್ತು ಶಂಕರನ ಪತ್ನಿ ಪ್ರಿಯಾಂಕಾ ಅವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ ಘಟನೆಗೆ ಇವರೇ ಕಾರಣ ಎನ್ನುವುದು ಗೊತ್ತಾಗಿದೆ.ಮೂಡಲಗಿ ತಾಲೂಕಿನ ಬೈರನಟ್ಟಿ ಗ್ರಾಮದ ಶ್ರೀಧರ ತಳವಾರ ಮತ್ತು ಪ್ರಿಯಾಂಕಾ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರ ಪ್ರೀತಿ ಆರನೇ ತರಗತಿಯಲ್ಲೇ ಕುದುರಿದೆ.
ಆದರೆ ಇದಕ್ಕೆ ಶಂಕರ ಮತ್ತು ಪ್ರಿಯಾಂಕಾ ಅವರ ಕುಟುಂಬದ ಹಿರಿಯರು ಸೇರಿ ಮಾತುಕತೆ ನಡೆಸಿ ಶಂಕರನೊಂದಿಗೆ 2023ರ ಮಾರ್ಚ್ 19 ರಂದು ವಿವಾಹ ನಡೆಸಿದ್ದರು. ಆದರೂ ಸಹಾ ಪ್ರಿಯಾಂಕಾ ಶ್ರೀಧರ ಜೊತೆ ಆಗಾಗ ಮಾತುಕತೆ ನಡೆಸುತ್ತಿದ್ದಳು.
ಪ್ರಿಯಾಂಕಾ ಹುಟ್ಟು ಹಬ್ಬವನ್ನು ಭಾನುವಾರ ರಾತ್ರಿ ಪತಿ ಶಂಕರನ ಕುಟುಂಬದೊಂದಿಗೆ ಆಚರಿಸಿ ಸಂಭ್ರಮಿಸಿದ್ದಳು. ಭೀಮನ ಅಮಾವಾಸ್ಯೆ ಮತ್ತು ಬನಸಿದ್ದೇಶ್ವರ ದೇವಸ್ಥಾನದ ಪೂಜಾರಿಯಾಗಿರುವ ಶಂಕರ ಜಗಮುತ್ತಿ ದೇವಸ್ಥಾನಕ್ಕೆ ಜೊತೆಯಾಗಿ ಹೋಗಿ ಬರುವುದಾಗಿ ಪತ್ನಿಗೆ ತಯಾರಾಗುವಂತೆ ಹೇಳಿದ್ದ.
ಆದರೆ ಪ್ರಿಯಾಂಕಾ ಮೊದಲೇ ದೇವಸ್ಥಾನಕ್ಕೆ ಬರುವ ವಿಷಯವನ್ನು ಪ್ರಿಯಕರ ಶ್ರೀಧರನಿಗೆ ತಿಳಿಸಿದ್ದಳು. ಶಂಕರನೊಂದಿಗೆ ದೇವಸ್ಥಾನಕ್ಕೆ ಬಂದು ದೇವರ ದರ್ಶನವನ್ನು ಪಡೆದಿದ್ದಾಳೆ. ವಾಪಾಸು ಬರುವಾಗ ಪತಿಗೆ ದ್ವಿಚಕ್ರ ವಾಹನ ತರುವಂತೆ ತಿಳಿಸಿ ವೇಗವಾಗಿ ನಡೆದುಕೊಂಡು ದೇವಸ್ಥಾನದ ಹೊರಬಂದು ನಿಂತಿದ್ದಾಳೆ. ಆಗ ಶ್ರೀಧರ ದೇವಸ್ಥಾನದ ಬಳಿ ಹೋಗಿ, ಲಾಂಗ್ ನಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ನಂತರ ಪ್ರಿಯಾಂಕಾ ರೋಧಿಸುವ ನಾಟಕವಾಡಿದ್ದಾಳೆ. ಆದರೆ ಈಕೆಯ ಬಗ್ಗೆ ಅನುಮಾನ ಪಟ್ಟ ಪೊಲೀಸರು ಕೊನೆಗೂ ವಿಚಾರಣೆ ನಡೆಸಿದಾಗ ಘಟನೆ ಹಿಂದೆ ಶ್ರೀಧರ ಮತ್ತು ಆಕೆ ಇರುವುದು ಗೊತ್ತಾಗಿದೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೇಮಿಯಿಂದ ಗಂಡನ ಹತ್ಯೆ : ಕೊನೆಗೂ ಹೆಂಡತಿ ನಾಟಕ ಬಯಲು !
