ಬೆಂಗಳೂರು :
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಡಾ.ರಜನೀಶ ಗೋಯಲ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
1986 ರ ಸಾಲಿನ ಐಎಎಸ್ ಅಧಿಕಾರಿಯಾಗಿರುವ ರಜನೀಶ ಗೋಯಲ್ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಅಧಿಕಾರಿಯಾಗಿ ಹೆಸರು ಮಾಡಿದ್ದರು. ಇದೀಗ ವಂದಿತಾ ಶರ್ಮಾ ಅವರಿಂದ ತೆರವಾಗಿರುವ ಮುಖ್ಯ ಕಾರ್ಯದರ್ಶಿ ಹುದ್ದೆಗೆ ರಜನೀಶ ಅವರನ್ನು ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ರಾಜ್ಯಪಾಲರು ನೇಮಕ ಮಾಡಿದ್ದಾರೆ.
ರಜನೀಶ ಗೋಯಲ್ ಅವರ ಧರ್ಮಪತ್ನಿ ಶಾಲಿನಿ ರಜನೀಶ ಅವರು ಒಂದುವರೆ ದಶಕಗಳ ಹಿಂದೆ ಬೆಳಗಾವಿಯ ಜಿಲ್ಲಾಧಿಕಾರಿಯಾಗಿ ತಮ್ಮ ಶ್ರೇಷ್ಠ ಕೆಲಸ ಕಾರ್ಯಗಳ ಮೂಲಕ ಜಿಲ್ಲೆಯ ಜನಮನ ಗೆದ್ದಿದ್ದರು. ಅವರ ಅವಧಿಯಲ್ಲಿ ನಡೆದಿರುವ ಕೆಲಸ ಕಾರ್ಯಗಳನ್ನು ಜಿಲ್ಲೆಯ ಜನತೆ ಈಗಲೂ ನೆನಪಿಸಿಕೊಳ್ಳುತ್ತಾರೆ. ಅಷ್ಟೊಂದು ನೆನಪಿನಲ್ಲಿ ಉಳಿಯುವಂತೆ ಶಾಲಿನಿ ರಜನೀಶ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕೆಲಸ ಮಾಡಿ ಇತಿಹಾಸ ಸೃಷ್ಟಿಸಿದ್ದರು.
ರಜನೀಶ ಅವರು ಡಿಸೆಂಬರ್ 1 ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಮುಂದಿನ ವರ್ಷದ ಜುಲೈವರೆಗೆ ಅವರ ಅಧಿಕಾರವಧಿ ಇರಲಿದೆ.
ಪ್ರಸ್ತುತ ರಜನೀಶ್ ಗೋಯಲ್ ಅವರು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.
ಸದ್ಯ ಮುಖ್ಯ ಕಾರ್ಯದರ್ಶಿಯಾಗಿರುವ ವಂದಿತಾ ಶರ್ಮಾ ಅವರ ಕಾರ್ಯಾವಧಿ ಇದೇ ನವೆಂಬರ್ 30ಕ್ಕೆ ಕೊನೆಗೊಳ್ಳುತ್ತಿರುವುದರಿಂದ ಹೊಸ ಮುಖ್ಯ ಕಾರ್ಯದರ್ಶಿಯ ನೇಮಕವಾಗಿದೆ.
ರಜನೀಶ್ ಗೋಯಲ್ ಅವರು ತಾಜ್ ವೆಸ್ಟ್ ಎಂಡ್ ಹೊಟೇಲ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದಾರೆ. ಸಿಎಂ ಭೇಟಿಯಾದ ಕೆಲವೇ ಕ್ಷಣಗಳಲ್ಲಿ ನೂತನ ಮುಖ್ಯ ಕಾರ್ಯದರ್ಶಿಯಾಗಿ ಆದೇಶ ಹೊರಡಿಸಲಾಗಿದೆ. ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಸಭೆಯ ನಡುವೆಯೇ ರಜನೀಶ್ ಗೋಯೆಲ್ ಸಿಎಂ ಭೇಟಿ ಮಾಡಿದ್ದಾರೆ.
ಇತರ ಹಿರಿಯ ಐಎಎಸ್ ಅಧಿಕಾರಿಗಳಾದ ಅಜಯ್ ಸೇಠ್, ವಿ.ಮಂಜುಳಾ ಮತ್ತು ರಾಕೇಶ್ ಸಿಂಗ್ ಅವರ ಹೆಸರುಗಳೂ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮುನ್ನೆಲೆಗೆ ಬಂದಿದ್ದವು. ಆದರೆ ಅಂತಿಮವಾಗಿ ರಜನೀಶ್ ಗೋಯಲ್ ಅವರನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ರಜನೀಶ ಅವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವ ಕುರಿತು ಜನಜೀವಾಳ ಕೆಲ ದಿನಗಳ ಹಿಂದೆ ಖಚಿತವಾಗಿ ವಿಶೇಷ ವರದಿ ಮಾಡಿದ್ದನ್ನು ಇಲ್ಲಿ ನೆನಪಿಸಬಹುದು.