ನವದೆಹಲಿ: ಮಧ್ಯರಾತ್ರಿ 1.44ರ ಸುಮಾರಿಗೆ ಭಾರತ ಕ್ಷಿಪಣಿ ದಾಳಿ ನಡೆಸಿದೆ. ಭಾರತೀಯ ಸಶಸ್ತ್ರ ಪಡೆಗಳ ಕ್ರಮಗಳು ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿಲ್ಲ ಬದಲಾಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಭಾರತ ನಡೆಸಿದ ’ಆಪರೇಷನ್ ಸಿಂಧೂರ’ ದಾಳಿಯಲ್ಲಿ ನಿಷೇಧಿತ ಉಗ್ರ ಸಂಘಟನೆಗಳಾದ ಜೈಶ್ –ಎ-ಮೊಹಮ್ಮದ್ (ಜೆಇಎಂ), ಲಷ್ಕರ್–ಎ–ತಯಬಾ (ಎಲ್ಇಟಿ) ಮತ್ತು ಇಜ್ಬುಲ್ ಮುಜಾಹಿದ್ದೀನ್ ಉಗ್ರರ ಪ್ರಧಾನ ಕಚೇರಿಗಳನ್ನು ಹೊಡೆದುರುಳಿಸಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಅಡಗುತಾಣಗಳ ಮೇಲೆ ಭಾರತೀಯ ವಾಯು ಸೇನೆ (ಐಎಎಫ್) ದಾಳಿ ನಡೆಸಿದೆ.
ಕಾರ್ಯಾಚರಣೆಯಲ್ಲಿ ನಿಷೇಧಿತ ಜೈಶ್ –ಎ-ಮೊಹಮ್ಮದ್ ಭಯೋತ್ಪಾದಕ ಗುಂಪುಗಳ ನೆಲೆಯಿರುವ ಬಹವಾಲ್ಪುರದಲ್ಲಿ ಮರ್ಕಜ್ ಸುಭಾನ್ ಅಲ್ಲಾ ಮಸೀದಿ, ತೆಹ್ರಾ ಕಲಾನ್ನಲ್ಲಿನ ಸರ್ಜಾಲ್, ಕೋಟ್ಲಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್ನ ಸೈಯದ್ನಾ ಬಿಲಾಲ್ ಕ್ಯಾಂಪ್ಗಳ ಮೇಲೆ ಭಾರತ ದಾಳಿ ನಡೆಸಿದೆ.
ಲಷ್ಕರ್–ಎ–ತಯಬಾ ಉಗ್ರ ಸಂಘಟನೆಯ ಶಿಬಿರಗಳಿರುವ ಮುರ್ಡಿಕೆಯ ಮರ್ಕಝ್ ತೈಬಾ, ಬರ್ನಾಲಾದಲ್ಲಿ ಮರ್ಕಝ್ ಅಹ್ಲೆ ಹದಿತ್ ಮತ್ತು ಮುಜಫರಾಬಾದ್ನ ಶ್ವವಾಯಿ ನಲ್ಲಾ ಮೇಲೆ ದಾಳಿ ನಡೆದಿದೆ.
ಕೋಟ್ಲಿಯ ಮಕಾಜ್ ರಹೀಲ್ ಶಾಹಿದ್ ಮತ್ತು ಸಿಯಾಲ್ಕೋಟ್ನ ಮೆಹಮೂನಾ ಜೋಯಾ ಪ್ರದೇಶಗಳಲ್ಲಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ನ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳಿದ್ದು, ಅವುಗಳನ್ನು ಧ್ವಂಸಗೊಳಿಸಲಾಗಿದೆ.
ಭಾರತದ ದಾಳಿಗೆ ಆಯ್ದುಕೊಂಡ 9 ಸ್ಥಳಗಳಲ್ಲಿ 4 ಪಾಕಿಸ್ತಾನದಲ್ಲಿದ್ದರೆ ಇನ್ನುಳಿದ ಐದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿವೆ.