ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸಿನಲ್ಲಿ ನಡೆದಿರುವ ರೈತ ಚಳವಳಿಯ ವಿರಾಟ ಸ್ವರೂಪ ನೋಡಿದರೆ 1980 ರಲ್ಲಿ ನಡೆದ ರೈತರ ಆಂದೋಲನ ನೆನಪಾಗುತ್ತದೆ.
ಅದೇ ವರ್ಷ ಜುಲೈ 21 ರಂದು ನರಗುಂದದಲ್ಲಿ ನಡೆದ ರೈತರ ಹೋರಾಟವು ಹಿಂಸಾಚಾರಕ್ಕೆ ತಿರುಗಿ ಗೋಲಿಬಾರ್ ನಡೆದು ಇಬ್ಬರು ರೈತರು ಹುತಾತ್ಮರಾದರು.
ನಂತರ ಅದೇ ವರ್ಷದ ಅಕ್ಟೊಬರ್ 17 ರಂದು ಕರ್ನಾಟಕ ರಾಜ್ಯ ರೈತ ಸಂಘವು ಅಸ್ತಿತ್ವಕ್ಕೆ ಬಂದಿತು.
ಎಚ್. ಎಸ್. ರುದ್ರಪ್ಪ, ಎಂ.ಡಿ. ನಂಜುಂಡಸ್ವಾಮಿ ಹಾಗೂ
ಎನ್. ಡಿ ಸುಂದರೇಶ ಅಂದಿನ ನಾಯಕರು. ಬೆಳಗಾವಿ ಜಿಲ್ಲೆಯಲ್ಲಿ ಕುಂದರನಾಡ ಪಾಟೀಲ, ಅಶೋಕ ಹೊನ್ನಾಳಿ ಹಾಗೂ ಸುರೇಶ ಬಾಬು ಪಾಟೀಲ್ ಗಜಪತಿ ಅವರು ಬೆಳಗಾವಿ ಜಿಲ್ಲೆಯ ರೈತ ನಾಯಕರು.
ರಾಜ್ಯದಲ್ಲಿ ರೈತ ಚಳವಳಿ ನಡೆದಾಗ ಗುಂಡೂರಾವ್ ಸರಕಾರ ಅಧಿಕಾರದಲ್ಲಿತ್ತು. ಒಮ್ಮೆ ಶಿವಮೊಗ್ಗಯಲ್ಲಿ ಭಾರಿ ಪ್ರಮಾಣದಲ್ಲಿ ಹೋರಾಟ ನಡೆದಾಗ ಬಂಧಿತ ರೈತರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ತಂದಾಗ ಅಲ್ಲಿ ಜಾಗೆ ತುಂಬಿ ತುಳುಕಿತ್ತು. ರೈತರೆಲ್ಲರೂ ಬೆಳಗಾವಿಂದ ಹಿಂಡಾಲಗಾ ವರೆಗಿನ 4 ಕಿ. ಮೀ. ರಸ್ತೆಯಲ್ಲಿಯೇ ಉಳಿದರು. ಪೊಲೀಸ್ ವ್ಯವಸ್ಥೆ ಕುಸಿಯಿತು. ಎಲ್ಲೆಂದರಲ್ಲಿ ರೈತರೇ ರೈತರು.
ಪತ್ರಕರ್ತನಾಗಿದ್ದ ನಾನು ರಸ್ತೆಯ ಮೇಲಿದ್ದ ರೈತರನ್ನು ಮಾತನಾಡಿಸಿದೆ. ಗುಂಡೂರಾವ್ ಸರಕಾರದಲ್ಲಿ ಮಂತ್ರಿಯಾಗಿದ್ದ ಬಂಗಾರೆಪ್ಪ ಅವರ ಬೆಂಬಲ ತಮಗಿದೆ ಎಂದು ಕೆಲವರು ಹೇಳಿದ್ದನ್ನು ನಾನು ” ಕನ್ನಡಮ್ಮ” ಪತ್ರಿಕೆಯಲ್ಲಿ ಮಾರನೇ ದಿನ ವರದಿ ಮಾಡಿಬಿಟ್ಟೆ!
ವರದಿಯು ಮುಖಪುಟದಲ್ಲಿ ಲೀಡ್ ಸುದ್ದಿಯಾಗಿ ಪ್ರಕಟವಾಯಿತು. ಬೆಳಗಾವಿಯಲ್ಲಿದ್ದ ಸಾವಿರಾರು ರೈತರು ಈ ವರದಿಯಿಂದ ಆಕ್ರೋಶಗೊಂಡರು. ತಮ್ಮದು
ರಾಜಕೀಯ ಪ್ರೇರಿತ ಚಳವಳಿ ಎಂಬಂತೆ ಬಿಂಬಿಸಲಾಗಿದೆ ಎಂದು ಸಿಟ್ಟಿಗೆದ್ದರು. ಮಾರುತಿ ಬೀದಿಯ ಮಾರುತಿ ಮಂದಿರದಲ್ಲಿ ನಡೆದ ಸಭೆಯ ನಂತರ ನೂರಾರು ರೈತರು ಗಣಪತಿ ಬೀದಿಯ ಕನ್ನಡಮ್ಮನ ಕಾರ್ಯಾಲಯಕ್ಕೆ ಬಂದು ಮುತ್ತಿಗೆ ಹಾಕಿದರು. ನಾನು ಅದೇ ದಿನ ಮುಂಜಾನೆ ಹಣಕಾಸು ಸಚಿವ ವೀರಪ್ಪ ಮೊಯ್ಲಿ ಅವರ ಸವದತ್ತಿ ಪ್ರವಾಸ ವರದಿ ಮಾಡಲು ವಾರ್ತಾ ಇಲಾಖೆಯ ವಾಹನದಲ್ಲಿ ಹೋಗಿದ್ದೆ. ಇತ್ತ ಕನ್ನಡಮ್ಮ ಕಾರ್ಯಾಲಯದಲ್ಲಿ ಸಂಪಾದಕ ಎಂ. ಎಸ್. ಟೋಪಣ್ಣವರ ಅವರು ರೈತರ ಕೈಗೆ ಸಿಕ್ಕರು. ವಾಗ್ವಾದ ನಡೆದು ಕೊನೆಗೆ ರೈತರು ಕೊಟ್ಟ ಸ್ಪಷ್ಟೀಕರಣವನ್ನು ಮಾರನೇ ದಿನದಂದು ಹಾಕಬೇಕಾಯಿತು. ವರದಿ ಮಾಡಿದ ನನ್ನನ್ನು ಕಾರ್ಯಲಯದಲ್ಲಿ ಹುಡುಕಾಡಿದರಂತೆ. ನಾನು ಸಂಜೆ 7 ಗಂಟೆಗೆ ಮರಳಿ ಬಂದಾಗ ಆಫೀಸಿನ ಯಾವ ಸಿಬ್ಬಂದಿಯು ನನ್ನೊಂದಿಗೆ ಮಾತನಾಡಲಿಲ್ಲ. ಸಂಪಾದಕರು ಆಗಿರುವ ಘಟನೆಯನ್ನು ವಿವರಿಸಿ, ” ನೀನು ಸಿಕ್ಕಿದ್ದರೆ ನಿನ್ನ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು ” ಎಂದರು.
ರುದ್ರಪ್ಪ ಅವರು ಅತ್ಯಂತ ಹಿರಿಯರು. ಬೆಳಗಾವಿಗೆ ಬಂದಾಗ ಬಸ್ ನಿಲ್ದಾಣದ ಎದುರಿಗೆ ಇರುವ ಅಪೋಲೋ ಲಾಜ್ ನಲ್ಲಿಯ ಹತ್ತು ರು. ಬಾಡಿಗೆಯ ರೂಮಿನಲ್ಲಿ ಇರುತ್ತಿದ್ದರು. ಇವರು ನಿಜಲಿಂಗಪ್ಪ ಸರಕಾರದಲ್ಲಿ
ಸಚಿವರಾಗಿದ್ದವರು.
ಎಂಭತ್ತರ ದಶಕದ ರೈತ ಚಳವಳಿಯ ಆಕ್ರೋಶ ಮತ್ತೊಮ್ಮೆ ಮರು ಕಳಿಸತೊಡಗಿದೆ. ಇದು ಯಾವ
ಹಂತಕ್ಕೆ ಮುಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ
✒️ಅಶೋಕ ಚಂದರಗಿ
ಬೆಳಗಾವಿ
ಮೊ. 9620114466


