ನವದೆಹಲಿ: ದುರಂತದ ಘಟನೆಯೊಂದರಲ್ಲಿ, ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ನೀಡಲು ಹೋಗಿದ್ದ ವ್ಯಕ್ತಿಯೊಬ್ಬರು ಶನಿವಾರ ರಾತ್ರಿ ಕಾರಿಗೆ ಬೆಂಕಿ ಹೊತ್ತುಕೊಂಡು ಹಚ್ಚಿ ಸುಟ್ಟು ಕರಕಲಾದ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಜಿಪುರದ ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮದುಮಗ ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ.
ನಾವಡ ನಿವಾಸಿಯಾಗಿರುವ ಅನಿಲ ಎಂಬವರ ವಿವಾಹ ಫೆಬ್ರವರಿ 14 ರಂದು ನಡೆಯಬೇಕಿತ್ತು. ಸ್ಥಳದಿಂದ ಬಂದ ದೃಶ್ಯಗಳು ವ್ಯಾಗನ್ ಆರ್ ಸುಟ್ಟು ಕರಕಲಾಗುತ್ತಿರುವುದನ್ನು ತೋರಿಸಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಅವರ ಹಿರಿಯ ಸಹೋದರ ಸುಮಿತ್ ಅವರು ಮಾತನಾಡಿ, ಅನಿಲ ಅವರು ಮಧ್ಯಾಹ್ನ ತಮ್ಮ ಮದುವೆಯ ಆಮಂತ್ರಣ ಪತ್ರಗಳನ್ನು ವಿತರಿಸಲು ಹೊರಗೆ ಹೋಗಿದ್ದರು, ಮತ್ತು ರಾತ್ರಿಯಾದರೂ ಅವರು ಹಿಂತಿರುಗದಿದ್ದಾಗ, ಕುಟುಂಬವು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ತಿಳಿಸಿದರು.
ಅಪಘಾತ ಸಂಭವಿಸಿದ ನಂತರ ಅನಿಲ್ ಅವರು ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ರಾತ್ರಿ 11:30 ರ ಹೊತ್ತಿಗೆ ನಮಗೆ ಕರೆ ಮಾಡಿದರು ಎಂದು ಅವರು ಹೇಳಿದರು.
ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಮತ್ತು ಫೆಬ್ರವರಿ 14 ರಂದು ಅನಿಲ್ ತಮ್ಮ ಸಹೋದರಿಯನ್ನು ಮದುವೆಯಾಗಲಿದ್ದಾರೆ ಎಂದು ಅನಿಲ್ ಅವರ ಬಾಮೈದ ಯೋಗೇಶ್ ಹೇಳಿದರು. “ಕಾರಿಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ನಮಗೆ ಇಲ್ಲಿಯವರೆಗೆ ತಿಳಿದಿಲ್ಲ” ಎಂದು ಅವರು ಹೇಳಿದರು.
ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.