ಬೆಂಗಳೂರು: ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿ ಅನುಷ್ಠಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಆಯೋಗದ ಶಿಫಾರಸಿನಂತೆ 2024-25ನೇ ಸಾಲಿನಿಂದ ನಾಲ್ಕು ವರ್ಷಗಳ ಪದವಿ ರದ್ದು ಮಾಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿ-2020 ರಾಜ್ಯದಲ್ಲಿ ಅನುಷ್ಠಾನಗೊಂಡ ನಂತರ ಪದವಿ ತರಗತಿಗಳಿಗೆ ಪ್ರವೇಶ ಪಡೆದು ವಿವಿಧ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇಚ್ಛಿಸಿದಲ್ಲಿ ನಾಲ್ಕು ವರ್ಷಗಳ ಆನರ್ಸ್ ಪದವಿಗೆ ಪ್ರವೇಶ ಪಡೆಯಬಹುದು. ವಿದ್ಯಾರ್ಥಿಗಳ ಬೇಡಿಕೆ, ಕಾಲೇಜುಗಳ ಮೂಲ ಸೌಕರ್ಯಗಳನ್ನು ಪರಿಗಣಿಸಿ, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನಾಲ್ಕನೇ ವರ್ಷದ ಪದವಿಗೆ ಅಗತ್ಯವಾದ ಸೂಕ್ತ ಕಾಲೇಜು ಅಥವಾ ಕೇಂದ್ರಗಳನ್ನು ವಿಶ್ವವಿದ್ಯಾಲಯಗಳು ಆಯ್ಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಲ್ಲಿ ಕೋರ್ಸ್ ಲಭ್ಯವಿಲ್ಲದಿದ್ದರೆ ಸಮೀಪದ ಕಾಲೇಜುಗಳಲ್ಲಿ ಪ್ರವೇಶ ನೀಡಬೇಕು ಎಂದು ಸೂಚಿಸಲಾಗಿದೆ.
2021-22ನೇ ಸಾಲಿನಿಂದ 2023-24ರವರೆಗೆ ಪ್ರವೇಶ ಪಡೆದವರು ನಾಲ್ಕು ವರ್ಷಗಳ ಆನರ್ಸ್ ಪದವಿ ಪಡೆದರೆ ಅಂಥವರು ಒಂದು ವರ್ಷದ ಏಕೀಕೃತ ಸ್ನಾತಕೋತ್ತರ ಪದವಿ ಮಾಡಬಹುದು. ಮೂರು ವರ್ಷದ ಪದವಿಗೆ ನಿರ್ಗಮಿಸಲು ಬಯಸುವವರು ಹಿಂದಿನಂತೆ ಎರಡು ವರ್ಷಗಳ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದು.
2021-22ನೇ ಸಾಲಿಗಿಂತ ಹಿಂದೆ ಇದ್ದ ರೀತಿಯೇ 2024-25ನೇ ಶೈಕ್ಷಣಿಕ ಸಾಲಿನಿಂದ ಪ್ರವೇಶ ನಿಯಮಗಳು ಇರಲಿವೆ. ಮೂರು ವಿಷಯಗಳ ಸಂಯೋಜನೆಯನ್ನೇ ಮುಂದುವರಿಸಲಾಗುತ್ತಿದೆ (ಉದಾ: ಕಲಾ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಸಂಯೋಜನೆ ಇತ್ಯಾದಿ). 5 ಮತ್ತು 6ನೇ ಸೆಮಿಸ್ಟರ್ನಲ್ಲಿ ಒಂದು ವಿಷಯದಲ್ಲಿ ಪ್ರಾವೀಣ್ಯ ಪಡೆಯಲು ಅವಕಾಶ ನೀಡಲಾಗಿದೆ. ಪದವಿ ಹಂತದ ಪಠ್ಯಕ್ರಮ ರೂಪಿಸುವ ಹೊಣೆಗಾರಿಕೆಯನ್ನು ಹಿಂದೆ ಇದ್ದಂತೆ ಆಯಾ ವಿಶ್ವವಿದ್ಯಾಲಯಗಳ ವಿಷಯವಾರು ಅಧ್ಯಯನ ಮಂಡಳಿಗಳಿಗೆ ನೀಡಲಾಗಿದೆ. ವಿಷಯವಾರು ಸಂಯೋಜನೆ, ಪ್ರವೇಶ ಪ್ರಕ್ರಿಯೆ ಮಾಹಿತಿಯನ್ನು ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳು ಯುಯುಸಿಎಂಎಸ್ ತಂತ್ರಾಂಶದ ಮೂಲಕ
ಪಡೆಯಬಹುದು.
2024-25ನೇ ಶೈಕ್ಷಣಿಕ ಸಾಲಿನಿಂದ ಪ್ರವೇಶ ಪಡೆಯುವ
ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಪದವಿ ರದ್ದು
ಮಾಡಿದ್ದರೂ, ಮಧ್ಯಂತರದಲ್ಲೇ ಪದವಿ ತೊರೆದರೆ ಅವರು
ವ್ಯಾಸಂಗ ಮಾಡಿದ ವರ್ಷಗಳ ಲೆಕ್ಕದಲ್ಲಿ ಕೋರ್ಸ್
ಪ್ರಮಾಣಪತ್ರ, ಡಿಪ್ಲೊಮಾ, ಪದವಿ ನೀಡುವ ಬಹು
ಪ್ರವೇಶ-ನಿರ್ಗಮನ ಪದ್ಧತಿಯನ್ನು ರದ್ದು ಮಾಡಿಲ್ಲ.
ಆಯೋಗ ಅಂತಿಮ ವರದಿ ಸಲ್ಲಿಸಿದ ನಂತರ ಈ ಕುರಿತು
ನಿರ್ಧಾರ ತೆಗೆದುಕೊಳ್ಳುವುದಾಗಿ ಉನ್ನತ ಶಿಕ್ಷಣ ಇಲಾಖೆ
ಹೇಳಿದೆ.