ಸಿದ್ದರೂಢ ಬಣ್ಣದ, ರಡ್ಡೇರಹಟ್ಟಿ :
ಕೃಷಿ ಕಾಯಕದೊಂದಿಗೆ ಎತ್ತುಗಳನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಕಾಳಜಿಯಿಂದ ಸಾಕಿ ಸಲಹುತ್ತಿದ್ದ ರೈತರು ಇಂದು ತಮ್ಮ ಸ್ವಾರ್ಥಕ್ಕಾಗಿ ದಯೆಯನ್ನು ಮರೆತು ಮೂಕ ಜಾನುವಾರಗಳನ್ನು ಇಟ್ಟುಕೊಂಡು ಹಣ ಗಳಿಕೆಯ ಆಸೆಗಾಗಿ ಅವುಗಳಿಗೆ ಹಿಂಸೆ ನೀಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ – ಕಾಗವಾಡ ತಾಲೂಕಿನಲ್ಲಿ ಐದಕ್ಕೂ ಹೆಚ್ಚು ಕಬ್ಬಿನ ಕಾರ್ಖಾನೆಗಳಲ್ಲಿ ಎತ್ತುಗಳು ಕಬ್ಬನ್ನು ಸಾಗಾಣಿಕೆ ಮಾಡುತ್ತಿರುವ ಈ ದೃಶ್ಯದಲ್ಲಿನ ಈ ಎತ್ತುಗಳ ಸಂಕಟ ನೋಡಿದರೆ, ಕರಳು ಚುರಕ್ ಎನ್ನದೆ ಇರಲಾರದು, ಅಷ್ಟು ಕಠೋರವಾಗಿ ಎತ್ತುಗಳನ್ನು ಕಬ್ಬು ಸಾಗಾಣಿಕೆಗೆ ಬಳಕೆ ಮಾಡುತ್ತಿದ್ದಾರೆ.
ಹಿಂದಿನ ಕಾಲದಲ್ಲಿ ಯಂತ್ರಗಳ ವಾಹನಗಳು ಬಳಕೆ ಇಲ್ಲದ ಕಾರಣ ಎತ್ತಿನ ಗಾಡಿಯಲ್ಲಿ ಸಾಗಾಟ ಮಾಡುವ ಅನಿವಾರ್ಯತೆ ಇತ್ತು. ಆದರೆ, ಈಗ ಕಾಲ ಬದಲಾಗಿದೆ ಟ್ರ್ಯಾಕ್ಟರ್, ಲಾರಿಗಳಂತ ಹಲವಾರು ಬಗೆಯ ವಾಹನಗಳು ಬಂದರೂ ಸಹಿತ ಕೆಲವು ನಿರ್ದಯ ಕಟುಕರು ಎತ್ತು, ದೇವರು ಎಂದು ಗೊತ್ತಿದ್ದರೂ ಸಹ ತಮ್ಮ ಸ್ವಾರ್ಥಕ್ಕಾಗಿ ಅವುಗಳ ತಡೆದುಕೊಳ್ಳುವ ಭಾರದ ಸಾಮರ್ಥ್ಯಕ್ಕಿಂತ ಹೆಚ್ಚಿನ ಕಬ್ಬನ್ನು ಹೇರಿ ಹಿಂಸೆ ನೀಡುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ಮೂಕ ಜಾನುವಾರುಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬೇಕಿದೆ ಎನ್ನುತ್ತಾರೆ ಹೋರಾಟಗಾರ ಸಂಪತ್ತಕುಮಾರ ಶೆಟ್ಟಿ,
ಕಾರ್ಖಾನೆಗಳಿಗೆ ಹೆಚ್ಚಿನ ಲಾಭದ ದೃಷ್ಟಿಯಿಂದ ಎತ್ತಿನಗಾಡಿಗಳಿಂದ ಕಬ್ಬು ಸಾಗಾಟಕ್ಕೆ ಮುಂದಾಗಿದ್ದರಿಂದ, ಎತ್ತುಗಳಿಗೆ ಸಕ್ಕರೆ ಕಾರ್ಖಾನೆಗಳು ಪರೋಕ್ಷವಾಗಿ ಹಿಂಸೆ ನೀಡಿದಂತಾಗಿದೆ. ಆದರೆ, ಇದರ ವಿರುದ್ಧ ಪ್ರಾಣಿ ದಯಾ ಸಮಿತಿಯವರು ಗಮನ ಹರಿಸದೇ ಇರುವುದು ನೋವಿನ ಸಂಗತಿಯಾಗಿದೆ. ಅತಿಯಾದ ಹಣದಾಸೆಗಾಗಿ ಕರುಣೆಯಿಲ್ಲದೆ ಎತ್ತುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಕಬ್ಬು ಹೇರಿ ಭಾರ ತಾಳದೇ ಎತ್ತುಗಳು ಕಾಲು ಜಾರಿ ಬಿದ್ದು ಅನಾಹುತ ಮಾಡಿಕೊಂಡಿರುವುದನ್ನು ನೋಡಬಹುದು.
ಆಗಿನ ಜನ ಎತ್ತುಗಳನ್ನು ವ್ಯವಹಾರ ದೃಷ್ಟಿಯಿಂದ ಸಾಕದೇ ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಬಳಸಿಕೊಂಡು ವರ್ಷವಿಡೀ ದೇವರೆಂದು ಪೂಜಿಸುತ್ತಿದ್ದರು. ಅದರೆ, ಇಂದಿನ ರೈತರು ವ್ಯವಹಾರಿಕ ದೃಷ್ಟಿಯಿಂದ ಎತ್ತುಗಳನ್ನ ಬಳಸುತ್ತಿದ್ದಾರೆ. ಹೀಗೆ ಅತಿಯಾದ ಕಬ್ಬನ್ನ ಸಾಗಿಸಲು ಎತ್ತುಗಳ ಬಳಕೆಯನ್ನ ಸರಕಾರ ನಿಷೇಧಿಸಲು ಮುಂದಾಗಬೇಕಿದೆ.