ಬೆಂಗಳೂರು : ಮಕ್ಕಳಿಗೆ ಕೆಮ್ಮಿನ ಸಿರಪ್ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಸೋಮವಾರ ಅಗತ್ಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್ ನೀಡಬಾರದು ಎಂದು ಹೇಳಿದೆ.
ಮಾರ್ಗಸೂಚಿಯಲ್ಲೇನಿದೆ?
– ಕೆಮ್ಮಿನ ಸಿರಪ್ ಬಳಕೆ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ
– 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್ ನೀಡಬಾರದು
– 2ರಿಂದ 5 ವರ್ಷದವರಿಗೆ ವೈದ್ಯರ ಸಲಹೆ ಮೇರೆಗೆ ಮಾತ್ರ ಔಷಧಿ ಪಡೆಯಬೇಕು
– ದೊಡ್ಡ ಮಕ್ಕಳಿಗೂ ಆದಷ್ಟು ಕಡಿಮೆ ಡೋಸ್ ಬಳಸಬೇಕು
– ಮಕ್ಕಳಿಗೆ ಸಾಕಷ್ಟು ದ್ರವ, ಪೌಷ್ಟಿಕ ಆಹಾರ ನೀಡಬೇಕು
– ಈ ಹಿಂದೆ ಬಳಸಿ ಉಳಿದ ಔಷಧಿಗಳಿದ್ದಲ್ಲಿ ಅಥವಾ ಇತರರು ಶಿಫಾರಸು ಮಾಡಿದ್ದ ಔಷಧಿಗಳನ್ನು ಬಳಸಬಾರದು
– ಔಷಧ ಅವಧಿ ಮುಗಿಯುವ ದಿನಾಂಕ, ಲೇಬಲ್ಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಬೇಕು
ಕೆಮ್ಮಿನ ಸಿರಪ್ನ ದುರುಪಯೋಗದಿಂದ ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಸಾವಿನ ವರದಿ ಸರ್ಕಾರದ ಗಮನಕ್ಕೆ ಬಂದಿದೆ. ಪೋಷಕರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು. 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್ ನೀಡಬಾರದು. 2 ರಿಂದ 5 ವರ್ಷ ವಯಸ್ಸಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆ ಬಳಿಕ ತಜ್ಞ ವೈದ್ಯರ ಸಲಹೆ ಮೇರೆಗೆ ಮಾತ್ರವೇ ಈ ರೀತಿಯ ಔಷಧಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ದೊಡ್ಡ ಮಕ್ಕಳಿಗೆ ಆದಷ್ಟು ಕಡಿಮೆ ಡೋಸ್ ಬಳಸಬೇಕು, ವೈದ್ಯರ ಸಲಹೆ ಮೇರೆಗೆ ಮಾತ್ರ ಕೆಮ್ಮಿನ ಸಿರಪ್ ಬಳಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಸಾಕಷ್ಟು ದ್ರವ ಪದಾರ್ಥಗಳನ್ನು, ಪೌಷ್ಟಿಕ ಆಹಾರವನ್ನು ನೀಡಬೇಕು. ಜೊತೆಗೆ ನಿದ್ರೆ, ವಿಶ್ರಾಂತಿಗೆ ಅವಕಾಶ ನೀಡಬೇಕು ಎಂದೂ ತಿಳಿಸಲಾಗಿದೆ.ವೈದ್ಯರ ಸಲಹೆ ಇಲ್ಲದೆ ಕೆಮ್ಮಿನ ಸಿರಪ್ ಖರೀದಿಸಬಾರದು. ಈ ಹಿಂದೆ ಬಳಸಿ ಉಳಿದ ಔಷಧಿಗಳಿದ್ದಲ್ಲಿ ಅಥವಾ ಇತರರು ಶಿಫಾರಸು ಮಾಡಿದ್ದ ಔಷಧಿಗಳನ್ನು ಬಳಸಬೇಡಿ. ಔಷಧ ಅವಧಿ ಮುಗಿಯುವ ದಿನಾಂಕ, ಲೇಬಲ್ಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ನಿರಂತರ ಕೆಮ್ಮಿದ್ದರೆ ವೈದ್ಯರಿಗೆ ತೋರಿಸಿ:
ಮಕ್ಕಳಲ್ಲಿ ಉಸಿರಾಟದ ತೊಂದರೆ, ನಿರಂತರ ಕೆಮ್ಮು, ಅತಿಯಾದ ಜ್ವರ ಅಥವಾ ಆಹಾರ ತಿರಸ್ಕರಿಸುವುದು, ನಿದ್ರಾವಸ್ಥೆ ಲಕ್ಷಣಗಳು ಕಂಡು ಬಂದಲ್ಲಿ ವಿಳಂಬ ಮಾಡದೆ ಹತ್ತಿರ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳಿಂದ ಕ್ರಮ
ಮಕ್ಕಳ ಕೆಮ್ಮಿನ ಸಿರಪ್ನಿಂದ ಬೇರೆ ರಾಜ್ಯಗಳಲ್ಲಿ ಸಾವು ಸಂಭವಿಸಿರುವ ವಿಷಯ ಗೊತ್ತಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೇನೆ. ಅವರು ಕ್ರಮ ಕೈಗೊಳ್ಳಲಿದ್ದಾರೆ. -ಸಿದ್ದರಾಮಯ್ಯ, ಮುಖ್ಯಮಂತ್ರಿ
ನಮ್ಮಲ್ಲಿ ಸರಬರಾಜು ಆಗಿಲ್ಲ
ಮಧ್ಯಪ್ರದೇಶದಲ್ಲಿ ನಡೆದ ಕಾಫ್ ಸಿರಪ್ ದುರಂತ ಪ್ರಕರಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗತ್ಯ ಕ್ರಮವನ್ನು ಸರ್ಕಾರ ವಹಿಸಿದೆ. ಕಾಫ್ ಸಿರಪ್ ನಮ್ಮ ರಾಜ್ಯದಲ್ಲಿ ಸರಬರಾಜು ಆಗಿಲ್ಲ. ಮಕ್ಕಳಿಗೆ ಔಷಧ ಕೊಡುವಾಗ ವೈದ್ಯರು ಎಚ್ಚರಿಕೆ ವಹಿಸಬೇಕು. -ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ವೈದ್ಯರ ಶಿಫಾರಸು ಇಲ್ಲದೆ ಮಕ್ಕಳಿಗೆ ಸಿರಪ್ ನೀಡಂಗಿಲ್ಲ: ಕೇರಳ ಆದೇಶ
ತಿರುವನಂತಪುರ:12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವೈದ್ಯರ ಶಿಫಾರಸು ಇಲ್ಲದೇ ಯಾವುದೇ ಔಷಧವನ್ನು ನೀಡುವಂತಿಲ್ಲ ಎಂದು ಕೇರಳ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಜತೆಗೆ, ಮಕ್ಕಳಲ್ಲಿ ಬಳಸುವ ಕೆಮ್ಮಿನ ಸಿರಪ್ಗಳನ್ನು ಅಧ್ಯಯನ ಮಾಡಲು ಮೂರು ಮಂದಿ ತಜ್ಞರಿರುವ ಸಮಿತಿ ರಚಿಸಿದೆ. ಸಿರಪ್ಗಳನ್ನು ಅಧ್ಯಯನ ನಡೆಸಿ ತುರ್ತಾಗಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.