ಬೆಂಗಳೂರು: ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದಿರುವ ಹಿನ್ನೆಲೆಯಲ್ಲಿ ಇದೊಂದು ಸಾಂಕ್ರಾಮಿಕ ರೋಗ ಎಂದು ಸರ್ಕಾರ ಘೋಷಿಸಿದೆ.
ಡೆಂಗಿ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ-2020ರ ಕಾಯ್ದೆಯನ್ನು ತಿದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ರಾಜ್ಯದಲ್ಲಿ ಸೋಮವಾರ ಹೊಸದಾಗಿ 147 ಮಂದಿ ಈ ಜ್ವರ ಪೀಡಿತರಾಗಿರುವುದು ಶುಕ್ರವಾರ ದೃಢಪಟ್ಟಿತ್ತು.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 24 ಗಂಟೆಗಳ ಅವಧಿಯಲ್ಲಿ 1,138 ಪರೀಕ್ಷೆಗಳನ್ನು ನಡೆಸಲಾಗಿದೆ. ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ 5 ಮಂದಿ ಒಂದು ವರ್ಷದೊಳಗಿನವರಾದರೆ, 35 ಮಂದಿ ಒಂದರಿಂದ 18 ವರ್ಷದೊಳಗಿನವರಾಗಿದ್ದಾರೆ. 107 ಮಂದಿ 18 ವರ್ಷ ಮೇಲ್ಪಟ್ಟವರಾಗಿದ್ದಾರೆ.
ರಾಜ್ಯದಲ್ಲಿ ಇದುವರೆಗೆ 25,408 ಡೆಂಗಿ ಪ್ರಕರಣಗಳು ವರದಿಯಾಗಿವೆ. ಆ ಪೈಕಿ 23,827 ಮಂದಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಾದ್ಯಂತ 1,569 ಸಕ್ರಿಯ ಡೆಂಗಿ ಪ್ರಕರಣಗಳಿವೆ.