ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಇದೀಗ ₹3,300 ನಿಗದಿ ಮಾಡಿದೆ. ಸರಕಾರದಿಂದ 50 ರೂಪಾಯಿ ಹಾಗೂ ಕಾರ್ಖಾನೆಯಿಂದ 50 ರೂಪಾಯಿ ನೀಡಲಾಗುವುದು. ಈ ಮೂಲಕ ₹ 3,300 ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೆಳಗಾವಿಯಲ್ಲಿ ಸಂತಸ :
ಕಬ್ಬಿಗೆ ದರ ನಿಗದಿಗಾಗಿ ಬೆಳಗಾವಿ ಜಿಲ್ಲೆಯ ರೈತರು ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, 3300 ರೂ ದರ ನಿಗದಿ ಮಾಡಿ ರೈತರ ಬೇಡಿಕೆ ಈಡೇರಿಸಿದೆ.
ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆಗೆ ಸಿಎಂ ಸಭೆ ನಡೆಸಿದ್ದು, ಸಭೆಯಲ್ಲಿ ರೈತರ ಪ್ರತಿಭಟನೆ ಬಗ್ಗೆ, ಎಫ್ಆರ್ ಸಿ ಬಗ್ಗೆ ಚರ್ಚಿಸಿ ರೈತರ ಬೇಡಿಕೆ ಅನುಸಾರವಾಗಿ ಇಂದು 3300 ದರ ನಿಗದಿ ಮಾಡಿ ಸಿಎಂ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ.
ರೈತರ ಹೋರಾಟ ವಿವಾದ ಸುಖಾಂತ್ಯ ಕಂಡಿದ್ದು, ಇದರಿಂದ ಬೆಳಗಾವಿ ಮಾತ್ರವಲ್ಲದೇ ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ರಾಯಚೂರು, ಕಲಬುರಗಿ, ಯಾದಗಿರಿ, ಶಿವಮೊಗ್ಗ, ದಾವಣಗೆರೆ, ಮಂಡ್ಯ ಜಿಲ್ಲೆಯ ರೈತರು ಗುಲಾಲು ಹಚ್ಚಿ ಸಂಭ್ರಮಿಸಿದ್ದಾರೆ.
ಕಳೆದ 9 ದಿನಗಳಿಂದ ರೈತರು ಬಿರುಸಿನ ಗಾಳಿಯಲ್ಲೂ, ಚಳಿಯಲ್ಲೂ ಅಹೋರಾತ್ರಿ ಕುಳಿತು ಹೋರಾಟ ನಡೆಸುತ್ತಿದ್ದು, ಇದು ಕೇವಲ ಕಬ್ಬಿನ ಹೋರಾಟ ಅಲ್ಲ, ಬದುಕಿನ ಹೋರಾಟ, ಎಂದು ಗುರ್ಲಾಪುರದ ರೈತರ ಮಾತು ಹೃದಯವನ್ನು ವಿದ್ರಾವಕಗೊಳಿಸುವಂತಹ ಮಾತುಗಳನ್ನು ಆಡಿದ್ದರು. ಈಗ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ರೈತರು ಸಂತೋಷ ವ್ಯಕ್ತ ಪಡಿಸಿದ್ದಾರೆ
ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬೆಳಗಾವಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಮುಖಂಡರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಸರ್ಕಾರ ಪ್ರತಿ ಟನ್ ಕಬ್ಬಿಗೆ 3300 ರೂಪಾಯಿ ದರ ನಿಗದಿ ಮಾಡಲು ನಿರ್ಧರಿಸಿದೆ. ಸರ್ಕಾರದಿಂದ 50 ರೂಪಾಯಿ ಹಾಗೂ ಕಾರ್ಖಾನೆಯಿಂದ 50 ರೂಪಾಯಿ ನೀಡಲಾಗುವುದು. ಈ ಮೂಲಕ ಒಟ್ಟು 3300 ರೂಪಾಯಿ ನೀಡಲು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸದ್ಯ ಕಬ್ಬಿನ ಕಿಚ್ಚು ಆರಿದಂತಾಗಿದೆ.


