ಪಣಜಿ: ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯುವುದು ಪರೀಕ್ಷೆಗಳ ಫಲಿತಾಂಶದಿಂದಲ್ಲ. ಬದಲಾಗಿ, ದೃಢ ನಿಶ್ಚಯ, ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಕೆಲಸದ ಬದ್ಧತೆಯಿಂದ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್ ರಾಮಕೃಷ್ಣ ಗವಾಯಿ ಹೇಳಿದ್ದಾರೆ.
ಪಣಜಿ ಸಮೀಪದ ಮಿರಮಾರ್ನಲ್ಲಿರುವ ವಿ.ಎಂ. ಸಲಗಾಂವಕರ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಅವರು, ಕಾನೂನು ಶಿಕ್ಷಣ ವ್ಯವಯಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ನಾನು ಕಾನೂನು ಪದವಿಯ ಕೊನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ನನ್ನ ತಂದೆ ಮಹಾರಾಷ್ಟ್ರ ವಿಧಾನ ಪರಿಷತ್ ಸಭಾಪತಿಯಾದರು. ಹೀಗಾಗಿ, ನಾವು ಅಮರಾವತಿಗೆ ವಾಸ ಬದಲಿಸಬೇಕಾಯಿತು. ನಮಗೆ ಮುಂಬೈನಲ್ಲಿ ಮನೆ ಇರಲಿಲ್ಲ. ಅಮರಾವತಿಯಲ್ಲಿದ್ದಾಗ ನಾನು ಆರೇಳು ಸಲವಷ್ಟೇ ಕಾಲೇಜಿಗೆ ಹೋಗಿರಬಹುದು. ನನ್ನ ಒಬ್ಬ ಸ್ನೇಹಿತ ತರಗತಿಯಲ್ಲಿ ನನ್ನ ಹಾಜರಿ ಹಾಕುತ್ತಿದ್ದ. ಮುಂದೆ ಆತ ಹೈಕೋರ್ಟ್ ನ್ಯಾಯಮೂರ್ತಿಯಾದ’ ಎಂದಿದ್ದಾರೆ.
‘ಕಾಲೇಜಿನಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿ ಕ್ರಿಮಿನಲ್ ಲಾಯರ್ ಆದ. ಎರಡನೇ ಯಾಂಕ್ ಪಡೆದವ ಹೈಕೋರ್ಟ್ ನ್ಯಾಯಮೂರ್ತಿಯಾದ. ನಾನು ಮೂರನೇಯವ; ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದೇನೆ’ ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ. ಆ ಮೂಲಕ, ವಿದ್ಯಾರ್ಥಿಗಳು ಅಂಕ ಗಳಿಸುವುದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದಂತೆ ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ.
ಕಾಲೇಜಿಗೆ ಹೋಗದಿದ್ದರೂ ನಿರಂತರವಾಗಿ ಪುಸ್ತಕಗಳನ್ನು ಓದುತ್ತಿದ್ದುದಾಗಿ ಮತ್ತು ಹಿಂದಿನ ಐದು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಇಟ್ಟುಕೊಂಡು ತಯಾರಿ ನಡೆಸುತ್ತಿದ್ದುದಾಗಿ ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದಾರೆ. ಅದರೊಂದಿಗೆ, ಓದನ್ನು ಕಡೆಗಣಿಸದಂತೆಯೂ
ವಿದ್ಯಾರ್ಥಿಗಳಿಗೆ ಅವರು ಕಿವಿ ಮಾತು ಹೇಳಿದ್ದಾರೆ.