ಮೈಸೂರು :
ಬುಧವಾರ ಲೋಕಸಭೆ ಕಲಾಪದ ಸಂದರ್ಭದಲ್ಲಿ ಒಳ ನುಗ್ಗಿದ ಪ್ರಕರಣದಲ್ಲಿ ಗುರುತಿಸಿಕೊಂಡಿರುವ ಮೈಸೂರು ಮೂಲದ ಮನೋರಂಜನ್ ಬಗ್ಗೆ ಇದೀಗ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ದೆಹಲಿ ಘಟನೆ ಬೆನ್ನಿಗೆ ಮೈಸೂರು ಪೊಲೀಸರು ಮನೋರಂಜನ್ ಮನೆಗೆ ದೌಡಾಯಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ವಿಜಯನಗರದ 2ನೇ ಹಂತದಲ್ಲಿರುವ ಮನೋರಂಜನ್ ಮನೆಗೆ ವಿಜಯನಗರ ಉಪವಿಭಾಗದ ಉಪ ಪೊಲೀಸ್ ಆಯುಕ್ತ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಆತನ ತಂದೆ ದೇವರಾಜೇಗೌಡ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
34 ವರ್ಷದ ಮನೋರಂಜನ್ ಮೈಸೂರು ವಿಜಯನಗರ ಎರಡನೇ ಹಂತದ ನಿವಾಸಿ. ದೇವರಾಜೇಗೌಡ ಅವರ ಮಗ. ಮೈಸೂರಿನಲ್ಲಿ ಜನಿಸಿ ಪ್ರಾಥಮಿಕ ಮತ್ತು ಪದವಿ ಪೂರ್ವ ಶಿಕ್ಷಣ ಪಡೆದಿದ್ದಾನೆ. ಮನೋರಂಜನ್ ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದವನು. ಬೆಂಗಳೂರು ಬಿಐಡಿ ಕಾಲೇಜಿನಿಂದ ಬಿಇ ಪದವಿ ಪಡೆದು ಸದ್ಯ ಮನೆಯಲ್ಲಿದ್ದ ಎಂಬ ಮಾಹಿತಿ ಗೊತ್ತಾಗಿದೆ. ಸಮಾಜದ ಬಗ್ಗೆ ಒಲವು ಹೊಂದಿ ನೊಂದವರಿಗೆ ಸಹಾಯ ಮಾಡಬೇಕೆಂಬ ಮನೋಭಾವನವನು. ಮನೆಯಲ್ಲಿ ಪುಸ್ತಕ ಹೆಚ್ಚು ಓದುತ್ತಿದ್ದ. ಬೆಂಗಳೂರು, ದೆಹಲಿಗೆ ತೆರಳುತ್ತಿದ್ದ. ಆದರೆ ಈಗ ಎಲ್ಲಿ ಹೋಗಿದ್ದ ಎನ್ನುವುದು ಗೊತ್ತಿಲ್ಲ, ನಾವು ಯಾವ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ಮಗ ತಪ್ಪು ಮಾಡಿದರೆ ಗಲ್ಲು ಶಿಕ್ಷೆ ಆಗಲಿ ಎಂದು ಅವನ ತಂದೆ ಪ್ರತಿಕ್ರಿಯಿಸಿದ್ದಾರೆ.