ಬೆಳಗಾವಿ :
ವಿದೇಶದಲ್ಲಿರುವ ಪುತ್ರ ಹಾಗೂ ಪುತ್ರಿ ತಂದೆಯ ಅಂತ್ಯಕ್ರಿಯೆಗೆ ಬಾರದೆ ಇದ್ದಾಗ ದಾರಿ ಕಾಣದೆ ಪೊಲೀಸರೇ ಆ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ ಘಟನೆ ವರದಿಯಾಗಿದ್ದು ಪೊಲೀಸರ ಕಾರ್ಯಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗಿದೆ.
ಪುಣೆ ಮೂಲದ 72 ವರ್ಷದ ಶರ್ಮಾ ಎಂಬ ವ್ಯಕ್ತಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಅವರ ಮಕ್ಕಳು ವಿದೇಶದಲ್ಲಿ ವಾಸವಾಗಿದ್ದರು.
ಪಾರ್ಶ್ವವಾಯು ಪೀಡಿತ ಶರ್ಮ ಅವರನ್ನು ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಚಿಕ್ಕೋಡಿ ತಾಲೂಕು ನಾಗರಮುನ್ನೊಳ್ಳಿ ಗ್ರಾಮದಲ್ಲಿರುವ ಕುಂಬಾರ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದರು. ನಂತರ ವಸತಿ ಗ್ರಹದಲ್ಲಿ ಇರಿಸಿದ್ದರು. ಈ ವ್ಯಕ್ತಿ ಗುತ್ತಿಗೆ ಆಧಾರದಲ್ಲಿ ಶರ್ಮಾರ ಆರೈಕೆ ಮಾಡುತ್ತಿದ್ದ. ಆದರೆ ಗುತ್ತಿಗೆ ಮುಗಿದ ಬಳಿಕ ಶರ್ಮಾ ಅವರನ್ನು ವಸತಿಗೃಹದಲ್ಲೇ ಬಿಟ್ಟು ತೆರಳಿದ್ದ. ಈ ವಿಷಯವನ್ನು ವಸತಿಗೃಹದ ವ್ಯವಸ್ಥಾಪಕ ಪೊಲೀಸರಿಗೆ ತಿಳಿಸಿದ. ಪೊಲೀಸರು ಬಂದು ವಿಚಾರಣೆ ನಡೆಸಿದಾಗ ತಾನು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಂದು ಶರ್ಮಾ ಪರಿಚಯಿಸಿಕೊಂಡಿದ್ದರು. ಅವರ ಪುತ್ರ ದಕ್ಷಿಣ ಆಫ್ರಿಕಾ ಹಾಗೂ ಪುತ್ರಿ ಕೆನಡಾದಲ್ಲಿ ಉತ್ತಮ ಕೆಲಸದಲ್ಲಿದ್ದಾರೆ. ಪೊಲೀಸರು ಮಕ್ಕಳ ಫೋನ್ ನಂಬರ್ ಪಡೆದು ಕರೆ ಮಾಡಿದ್ದರೂ ಮಕ್ಕಳಿಂದ ಮಾತ್ರ ಪ್ರತಿಕ್ರಿಯೆ ಸಿಗಲಿಲ್ಲ. ಬಳಿಕ ಚಿಕ್ಕೋಡಿ ಪೊಲೀಸರು ಶರ್ಮಾ ಅವರನ್ನು ಬೆಳಗಾವಿ ಬಿಮ್ಸ್ ಗೆ ಕರೆ ತಂದು ಚಿಕಿತ್ಸೆ ನೀಡಿದ್ದಾರೆ. ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಿಸದೆ ಶರ್ಮಾ ಮೃತಪಟ್ಟಿದ್ದಾರೆ. ಮೃತಪಟ್ಟ ವಿಷಯ ಪುತ್ರಿಗೆ ತಿಳಿಸಿದರೆ ಅವರು ನಮಗೂ ತಂದೆಗೂ ಸಂಬಂಧ ಇಲ್ಲ ಎಂದು ಫೋನ್ ಕಟ್ ಮಾಡಿದ್ದಾರೆ.
ಕೊನೆಗೂ ಚಿಕ್ಕೋಡಿ ಪೊಲೀಸರು ಶವ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಘಟನೆ ಬಗ್ಗೆ ಸಾರ್ವಜನಿಕರು ಇದೀಗ ಮಕ್ಕಳ ಬೇಜವಾಬ್ದಾರಿಗೆ ಹಿಡಿ ಶಾಪ ಹಾಕುತ್ತಿದ್ದು ಪೊಲೀಸರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.