ಬೆಳಗಾವಿಯಲ್ಲಿ 1.11.1956 ರ
ಚೊಚ್ಚಲ ಕರ್ನಾಟಕ ರಾಜ್ಯೋತ್ಸವದ ಅಪರೂಪದ ಚಿತ್ರಣವನ್ನು ಜನಜೀವಾಳ ಅತ್ಯಂತ ಸುಂದರ ಹಾಗೂ ಸ್ವಾರಸ್ಯಮಯವಾಗಿ ಕಟ್ಟಿಕೊಟ್ಟಿದೆ. ಅಪರೂಪದಲ್ಲೇ ಅಪರೂಪವಾದ ಸಂಗ್ರಹಯೋಗ್ಯ ಹಾಗೂ ಆ ಕಾಲದ ವಾಸ್ತವ ಚಿತ್ರಣವನ್ನು ಜನಜೀವಾಳ ಕನ್ನಡಿಗರಿಗೆ ನೆನಪಿಸುತ್ತಿದೆ.
ಬೆಳಗಾವಿ ಕನ್ನಡಿಗರ ಸಡಗರದ ಸಮಾರಂಭ: 5-11-1956 ಜನಜೀವಾಳ ಸಂಚಿಕೆಯಲ್ಲಿ ಬೆಳಗಾವಿ ಕರುನಾಡಿಗೆ ಸೇರ್ಪಡೆಗೊಂಡ ಮೊದಲ ವರ್ಷದ ಚಿತ್ರಣವನ್ನು ಬಿಚ್ಚಿಟ್ಟಿದೆ.
ಧ್ವಜವಂದನೆ: ಹೊಸ ಮೈಸೂರು ರಾಜ್ಯದ ಶುಭೋದಯದ ದಿನವಾದ 1-11-1956 ರರ ಮುಂಜಾನೆ 8 ಗಂಟೆಗೆ ಬೆಳಗಾವಿಯ ಲಿಂಗರಾಜ ಕಾಲೇಜಿನ ಆಟದ ಬಯಲಿನಲ್ಲಿ ಬೆಳಗಾವಿಯ ಕಮೀಶನರರಾದ ಶ್ರೀ ರಾಮನಾಥಯ್ಯನವರಿಂದ ಧ್ವಜವಂದನೆಯಾಯಿತು. ಈ ಹೊತ್ತಿನಲ್ಲಿ ಭಾಷಣವೇನೂ ನಡೆಯಲಿಲ್ಲ ಮಕ್ಕಳಿಗೆ ಮಿಠಾಯಿ ಹಂಚಲಾಯಿತು. ಪೊಲೀಸರು, ರಿಸರ್ವ ಪೋಲಿಸರು ವಾದ್ಯಗಳೊಂದಿಗೆ ಕೂಚ ನಡೆಸಿದರು. ಅಧಿಕಾರಿಗಳು ಅಧಿಕಾರೇತರರೂ ಸಾಕಷ್ಟು ಪ್ರಮಾಣದಲ್ಲಿ ಈ ಸಮಾರಂಭಕ್ಕೆ ಬಂದಿದ್ದರು.
ಮೆರವಣಿಗೆ: ನಡುಹಗಲಿನ ಮೂರು ಗಂಟೆಗೆ ಲಿಂಗರಾಜ ಕಾಲೇಜಿನ ಬಯಲಿನಿಂದ ಮೆರವಣಿಗೆ ಹೊರಟು ಊರಲ್ಲಿಯ ಮುಖ್ಯ ಮುಖ್ಯ ಬೀದಿಗಳಲ್ಲಿ ಸುತ್ತಾಡಿತು. ಮೆರವಣಿಗೆಯಲ್ಲಿ ಹಳ್ಳಿಗರು ಬೆಳಗಾವಿಗರು ಹಿಂದೆಂದೂ ಕಾಣದಷ್ಟು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದರು. ಮೆರವಣಿಗೆಯ ಮುಂದೆ ಎಲ್ಪಾರಟ್ಟಿ ಕೈಪಟ್ಟ ಬಾರಿಸಲಾಗುತ್ತಿತ್ತು. ಮಹಾಲಿಂಗಪೂರದ ಕರಡಿ ಮಜಲು ಬೆಳಗಾವಿಗೆ ಹೊಸದೆಂದೇ ಹೇಳಬೇಕು. 2 ಜೋಡು ಬ್ಯಾಂಡ ವಾದಗಳೂ ನಡುನಡುವೆ ಗುಡುಗುತ್ತಿದ್ದವು. ಮೆರವಣಿಗೆಯ ನಟ್ಟನಡುವೆ ಡಮಣಿಯ ಮೇಲೆ ಮಹಾತ್ಮರು, ಜವಾಹಾರ, ರಾಜೇಂದ್ರ ಪ್ರಸಾದ ಇವರ ಭಾವ ಚಿತ್ರಗಳು ಕಂಗೊಳಿಸುತ್ತಿದ್ದವು. ಭಜನಿಯ ಮೇಳ, ಪೂಜಾರಿಯ ಕೋಲಿನ ಆಟಗಳು ಇದ್ದವು. ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದ ಬೆಳಗಾವಿಯ ರಾಷ್ಟ್ರೀಯ ಹಾಟೆಲ ಮಜದೂರರ ಒಂದೇ ಒಂದು ಕನ್ನಡ ಪಟವು ಆಕರ್ಷಕವೂ ಅಭಿಮಾನೋತ್ಪಾದಕವೂ ಆಗಿ ಹೊಳೆಯುತ್ತಿತ್ತು. ಅಲ್ಪಸಂಖ್ಯಾತ ಭಾಷಿಕರಿಗೆ ಸಂರಕ್ಷಣೆ ಮುಂತಾದ ಮಾರಾಟ ಪಟಗಳನ್ನಷ್ಟೇ ಹಿಡಿಯುವುದರಲ್ಲಿ ಬಂದಿತ್ತು. ಈ ಮರಾಠ ಪಟಗಳೊಂದಿಗೆ ಇದೇ ಅರ್ಥದ ಕನ್ನಡ ಪಟಗಳನ್ನು ಹಚ್ಚಿದರೆ ಉತ್ಸವ ಸಮಿತಿಯ ಗಂಟೇನು ಹೋಗುತ್ತಿತ್ತೋ! ಎಡಬಲಕ್ಕೆ ಮತ್ತು ಹಿಂಗಡೆ ಪರಿಸರ ಸಂರಕ್ಷಣದ ಏರ್ಪಾಟು ಹೊಸ ಆಡಳಿತದ ಹೆಗ್ಗುರುತೊ ಏನೋ ಅನ್ನುವಂತೆ ತತ್ಪರತೆ ಓರಣಗಳಿಂದ ಕೂಡಿತ್ತು.
ಊರ ಸಿಂಗಾರ: ಸೆಟ್ಟಿ, ಬಡಕಲ, ಗಣಪತಿ ಬೀದಿಗಳು, ಖಡೇಬಜಾರ, ಮೇದರ ಬೀದಿ, ಶನಿವಾರಕೂಟ, ರವಿವಾರ ಪೇಟೆ, ಮಾಳಿ ಬೀದಿ, ಬಸವನ ಬೀದಿ, ಅನಂತಶಯನ ಬೀದಿ, ಶೆರಿ ಬೀದಿ, ಶಹಪೂರಿನ ಪೇಟೆ, ವಿಠ್ಠಲದೇವ ಬೀದಿ, ಹೊಸ ಹಟ್ಟಿಗಳೆಲ್ಲ ಕಮಾನು, ಪರಪರಿ, ರಾಷ್ಟ್ರ ಧ್ವಜಗಳಿಂದ ಮುದ್ದು ಮುದ್ದಾಗಿ ಸಿಂಗಾರಗೊಂಡಿದ್ದವು. ಜಯ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ, ಸುಸ್ವಾಗತ, ಉದಯವಾಯಿತು ಚೆಲುವ ಕನ್ನಡನಾಡು ಎಂಬ ನುಡಿಗಳು ಕಮಾನುಗಳ ಮೇಲೆ ಕಣ್ಮನ ತಣಿಸುವಂತೆ ಚಿತ್ರಿತವಾಗಿದ್ದವು. ಬಡಕಲ ಬೀದಿಯಲ್ಲಿಯ ಕಮಾನ, ಬಾಳೆದಿಂಡುಗಳನ್ನು ಕೆಡಹುವುದು, ಗಣಪತಿ ಬೀದಿಯ ಪಾಂಗೋಳ ಬೀದಿ ಕೂಟದಲ್ಲಿ ಪರಿಪರಿಯ ಸಣಬಕ್ಕೆ ಒಂದೆರಡು ಕರಿ ಅರಿವೆಗಳನ್ನು ಹಚ್ಚುವುದನ್ನು ಬಿಟ್ಟರೆ ಎಲ್ಲವೂ ಸರಾಗವಾಗಿ ಸಾಗಿತು.
ಮರಾಠಿಗರ ಹರತಾಳ: ಮರಾಠಿಗರ ಹರತಾಳವೂ ಅಷ್ಟೇ ದೊಡ್ಡ ಪ್ರಮಾಣದಲ್ಲಿ ರಣಗುಡುತ್ತಿತ್ತು! ಗೊಂದಲವಾಗುವುದೆಂಬ ಎಂಬ ಅಂಜಿಕೆಯಿಂದ ಎಷ್ಟೋ ಕನ್ನಡ ಅಂಗಡಿಗಳು ಇಂದು ಮುಚ್ಚಿದ್ದವು. ಮರಾಠಿಗರು ಸಂಜೆ 4 ಗಂಟೆಗೆ ಬಹುದೊಡ್ಡ ಪ್ರಮಾಣದಲ್ಲಿ ಮೂಕ ಮೆರವಣಿಗೆ ಹೊರಡಿಸಿ ಯೂನಿಯನ ಜಮಖಾನ ಬಯಲಿನಲ್ಲಿ ಸಭೆ ಸೇರಿ ಎಂದೆಂದೂ ಕರ್ನಾಟಕದಲ್ಲಿ ಸೇರುವುದಿಲ್ಲವೆಂಬ ತಮ್ಮ ನಿತ್ಯದ ನಿಷೇಧವನ್ನು ಹೊರಪಡಿಸಿದರು.
ಕನ್ನಡಿಗರ ಸಭೆ: ಕನ್ನಡಿಗರು ಸಂಜೆಯ 5 ರಿಂದ 6 ಗಂಟೆವರೆಗೆ ಲಿಂಗರಾಜ ಕಾಲೇಜಿನ ಬಯಲಿನಲ್ಲಿ ಪ್ರಚಂಡ ಪ್ರಮಾಣದಲ್ಲಿ ಸಭೆ ಸೇರಿ ಭಾಷಿಕ ಅಲ್ಪಸಂಖ್ಯಾಕರಿಗೆ ಸಂರಕ್ಷಣೆ ನೀಡುವ ಆಶ್ವಾಸನ ರೂಪಕ ಗೊತ್ತುವಳಿ ಸ್ವೀಕರಿಸಿದರು. ಹಿಂದೆಂದೂ ಕಾಣದಷ್ಟು ದೊಡ್ಡ ಪ್ರಮಾಣದಲ್ಲಿ ಇಂದು ಕನ್ನಡಿಗರ ಉತ್ಸಾಹ ಚಿಮ್ಮಿ ಚಿಮ್ಮಿ ಹೊರಸೂಸುತಿತ್ತು. ರಾತ್ರಿ ಪಾರಿಜಾತ ನಾಟಕವೂ ಆಯಿತು.
ಕನ್ನಡ ಮಂತ್ರಿಗಳು: ಹೊಸ ಮೈಸೂರು ರಾಜ್ಯದ ಮಂತ್ರಿಮಂಡಳವು ಶ್ರೀ.ಎಸ್. ನಿಜಲಿಂಗಪ್ಪನವರ ಮುಂದಾಳುತನದಲ್ಲಿ 1-11-1956 ರ ಮುಂಜಾನೆ 9-40 ಗಂಟೆಗೆ ಅಧಿಕಾರ ಸ್ವೀಕರಿಸಿತು. ಮಂತ್ರಿಗಳ ಹೆಸರುಗಳು ಇಂತಿವೆ: ಶ್ರೀಗಳಾದ ಸಿದ್ದವನಹಳ್ಳಿ ನಿಜಲಿಂಗಪ್ಪ (ಹಿರಿ ಮಂತ್ರಿ) ಕಡಿದಾಳ ಮಂಜಪ್ಪ, ಎ.ಬಿ. ಶೆಟ್ಟಿ , ಎಂ.ಪಿ.ಪಾಟೀಲ, ಸಿ. ಎಂ.ಪುಣಚ್ಚ, ಎಚ್.ಎಸ್.ರುದ್ರಪ್ಪ, ಜಗನ್ನಾಥ ರಾವ ಚಂಡರಕಿ, ಟಿ.ಮರಿಯಪ್ಪ, ಎಂ.ವಿ ರಾಮರಾವ, ಆರ್. ಚನ್ನಿಗರಾಮಯ್ಯ, ಎ. ಭೀಮಪ್ಪ ನಾಯಕ, ಎಚ್.ಕೆ ವೀರಣ್ಣಗೌಡ.
ಇವರಲ್ಲಿ 7 ಜನರು ಮೈಸೂರಿಗರು ಐವರು ಮೈಸೂರೇತರರೂ ಇದ್ದಾರೆ. ಮೈಸೂರಿಗರಲ್ಲಿ 6 ಜನರು ಹೊಚ್ಚ ಹೊಸಬರಿರುವರು. ಇನ್ನೂ ಇಬ್ಬರನ್ನು ಮಂತ್ರಿಗಳ ಸ್ಥಳಕ್ಕೆ ತೆಗೆದುಕೊಳ್ಳು ವುದರಲ್ಲಿ ಬರುತ್ತಿದೆ.
ತೆರೆಯ ಮರೆಯ ಮತಭೇದ : ಶ್ರೀ ನಿಜಲಿಂಗಪ್ಪನವರ ಆಯ್ಕೆಯು ತೋರಿಕೆಗೆ ಒಮ್ಮತದಿಂದ ನಡೆದಿದ್ದರೂ ಕಾಂಗ್ರೆಸ್ಸಿನ ತೆರೆಯ ಮರೆಯಲ್ಲಿ ಮತಭೇದವು ಕಂಡೂ ಕಾಣದೆ ತಾಂಡವವಾಡುತ್ತಿದೆ. ಕೆ.ಸಿ.ರೆಡ್ಡಿ ಹನುಮಂತಯ್ಯ ಮತ್ತು ನಿಜಲಿಂಗಪ್ಪನವರ ಮೂರು ಗುಂಪುಗಳೇ ಈ ಆಯ್ಕೆಯ ಗೆಲ್ಲಿಗೆ ಪ್ರಬಲ ಕಾರಣವಾಗಿದೆ ಎಂದು ಅರಿತ ವರ್ಗಗಳು ಬಡಬಡಿಸುತ್ತಿವೆ.
ಶ್ರೇಷ್ಠ ನ್ಯಾಯಾಧೀಶರು: ಶ್ರೀಗಳಾದ ಆರ್. ವೆಂಕಟರಾಮಯ್ಯ (ಮುಖ್ಯ ನ್ಯಾಯಾಧೀಶ), ನಿಟ್ಟೂರು ಶ್ರೀನಿವಾಸರಾವ ಮತ್ತು ಹೊಂಬೆಗೌಡರು ರಾಜ್ಯಪಾಲರೆದುರು ಮೈಸೂರು ರಾಜ್ಯದ ಶ್ರೇಷ್ಟ ನ್ಯಾಯಸ್ಥಾನದ ನ್ಯಾಯಧೀಶರೆಂದು ನಿಷೇಧಿಸಿರುವುದು ಪ್ರತಿಜ್ಞೆ ಸ್ವೀಕರಿಸಿದರು.