ಶ್ರೀನಗರ : ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ವಿರಾಮ ಘೋಷಣೆಯ ನಂತರವೂ ಕಾಶ್ಮೀರದಲ್ಲಿ ಸ್ಫೋಟದ ಶಬ್ದ ಕೇಳಿ ಬಂದಿದೆ.
ಈ ಕುರಿತು ಸಾಮಾಜಿಕ ಮಾದ್ಯಮ ಎಕ್ಸ್ನಲ್ಲಿ ವಿಷಯ ಹಂಚಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ‘ಉಭಯ ರಾಷ್ಟ್ರಗಳು ಕದನ ವಿರಾಮ ಘೋಷಿಸಿದ ನಂತರವೂ ಸ್ಫೋಟದ ಶಬ್ದ ಕೇಳಿಸುತ್ತಿದೆ’ ಎಂದಿದ್ದಾರೆ.
‘ಇದೆಂಥ ಅವಸ್ಥೆ. ಕದನ ವಿರಾಮ ಘೋಷಣೆಯಾಗಿದೆ. ಆದರೂ ಶ್ರೀನಗರದ ಸುತ್ತಮುತ್ತ ಸ್ಫೋಟದ ಶಬ್ದಗಳು ಮೊಳಗುತ್ತಲೇ ಇವೆ’ ಎಂದು ಹೇಳಿದ್ದಾರೆ.
ಏ. 22ರಂದು ಪಹಲ್ಲಾಮ್ನಲ್ಲಿ ಭಯೋತ್ಪಾದಕರು 26 ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಮೇ 7ರಂದು ‘ಆಪರೇಷನ್ ಸಿಂಧೂರ’ ಆರಂಭಿಸಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆ ಹೊಂದಿದ್ದ ಹಲವು ಭಯೋತ್ಪಾದಕ ಸಂಘಟನೆಗಳ ಪ್ರಧಾನ ಕಚೇರಿ ಮತ್ತು ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನವೂ ದಾಳಿಯ ಯತ್ನ ನಡೆಸಿತ್ತು. ಪಾಕ್ನ ದಾಳಿಯ ಯತ್ನಗಳನ್ನು ತಕ್ಕ ಪ್ರತ್ಯುತ್ತರಗಳ ಮೂಲಕ ಭಾರತ ವಿಫಲಗೊಳಿಸಿದೆ.
ಇದರ ಬೆನ್ನಲ್ಲೇ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಸಮ್ಮತಿಸಿವೆ ಎಂದು ಅಮೆರಿಕ ಶನಿವಾರ ಸಂಜೆ ಹೇಳಿತು. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇದಕ್ಕೆ ಪ್ರತಿಕ್ರಿಯಿಸಿ, ‘ಕದನ ವಿರಾಮಕ್ಕೆ ಭಾರತ ಒಪ್ಪಿದೆ. ಆದರೆ ಭಯೋತ್ಪಾದನೆ ವಿರುದ್ಧ ಸಮರಕ್ಕಲ್ಲ’ ಎಂದು ಹೇಳಿದ್ದಾರೆ.
ಕದನ ವಿರಾಮ ಘೋಷಣೆಯ ನಂತರವೂ ಕಾಶ್ಮೀರದಲ್ಲಿ ಸ್ಫೋಟದ ಶಬ್ದ ಕೇಳಿಸಿದ್ದಕ್ಕೆ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.