ಬೆಳಗಾವಿ ಮನೆಮಗಳು, ಚನ್ನಮ್ಮ ಎಂದೆಲ್ಲ ಗುರುತಿಸಿಕೊಳ್ಳುತ್ತಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕಿ. ತಮ್ಮ ಪ್ರಖರ ಮಾತು ಹಾಗೂ ವರ್ಚಸ್ವಿ ನಾಯಕತ್ವದ ಮೂಲಕ ಇಡೀ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂಥ ಜನ ಮನ್ನಣೆ ಗಳಿಸಿರುವ ರಾಜ್ಯಮಟ್ಟದ ನಾಯಕಿ ಗೋಕಾಕನಿಂದ ಸ್ಪರ್ಧೆಗಿಳಿದರೆ ಕಾಂಗ್ರೆಸ್ ಜಯಭೇರಿ ಗಳಿಸಲಿದೆ ಎನ್ನುವುದು ಚಿಂತಕರ ಅಭಿಪ್ರಾಯವಾಗಿದೆ.
ಜನಜೀವಾಳ ಸರ್ಚ್ ಲೈಟ್ ಬೆಳಗಾವಿ: ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಜನಪ್ರಿಯ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೋಕಾಕ ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧಿಸುತ್ತಾರಾ? ಎಂಬ ಚರ್ಚೆ ಇದೀಗ ಸದ್ದು ಮಾಡುತ್ತಿದೆ.
ಪಂಚಮಸಾಲಿ ಸಮಾಜದ ನಾಯಕ ಗಿಡ್ಡನ್ನವರ್ ನೀಡಿರುವ ಈ ಹೇಳಿಕೆ ಇದೀಗ ಬೆಳಗಾವಿ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಹಿಂದೆ ಜೆಡಿಎಸ್ ಮತ್ತು ಬಿಜೆಪಿಯಿಂದ ಕಣಕ್ಕಿಳಿದಿದ್ದ ಅಶೋಕ ಪೂಜಾರಿ ಇದೀಗ ಮಗದೊಂದು ಸಲ ಕಾಂಗ್ರೆಸ್ ನಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ, ಸತತ ಸೋಲಿನಿಂದ ಕಂಗೆಟ್ಟಿರುವ ಇಲ್ಲಿ ಕಾಂಗ್ರೆಸ್ ಮತ್ತೆ ಖಾತೆ ತೆರೆಯಬೇಕು ಎಂಬ ನಿಟ್ಟಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥ ಅಭ್ಯರ್ಥಿ ಎಂಬ ಮಾತು ಇದೀಗ ಕೇಳಿಬಂದಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ನಾಯಕಿಯಾಗಿರುವುದರಿಂದ ಇಡೀ ರಾಜ್ಯಾದ್ಯಂತ ಕಾಲಿಗೆ ಚಕ್ರ ಸುದ್ದಿಕೊಂಡು ಸುತ್ತಾಡುತ್ತಾರೆ. ಜನರನ್ನು ತಮ್ಮತ್ತ ಸೆಳೆಯುವ ಅಮೋಘ ಕೌಶಲ್ಯವನ್ನು ಅವರು ಸಿದ್ದಿಸಿಕೊಂಡಿದ್ದಾರೆ. ಹೀಗಾಗಿ, ಜನಪ್ರಿಯತೆ ಹೊಂದಿರುವ ಹಾಗೂ ಬೆಳಗಾವಿ ಜಿಲ್ಲೆಯವರೇ ಆಗಿರುವುದರಿಂದ ಗೋಕಾಕನಲ್ಲಿ ಅವರ ಸ್ಪರ್ಧೆಗೆ ಪೂರಕ ವಾತಾವರಣ ಇದೆ ಎನ್ನುವುದು ರಾಜಕೀಯ ಚಿಂತಕರ ಅಭಿಪ್ರಾಯವಾಗಿದೆ. ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಂಚಮಸಾಲಿ ಸಮಾಜದ ಮತಗಳು ಯಥೇಚ್ಛ ಪ್ರಮಾಣದಲ್ಲಿವೆ. ಒಂದು ವೇಳೆ ಅವರು ಅಲ್ಲಿಂದ ಸ್ಪರ್ಧೆ ನಡೆಸಿದರೆ ಆ ಎಲ್ಲಾ ಮತಗಳು ಅವರಿಗೆ ಹರಿದು ಬರುವುದರಲ್ಲಿ ಯಾವುದೇ ಸಂದೇಹವಿಲ್ಲ.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಹಿಂದೆ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯಭಾರ ನಿಭಾಯಿಸಿದವರು. ಆ ಸಂದರ್ಭದಲ್ಲಿ ಇಡೀ ಜಿಲ್ಲೆಯಾದ್ಯಂತ ಅತ್ಯಂತ ನಿಕಟ ಸಂಪರ್ಕ ಇಟ್ಟುಕೊಂಡು ಓಡಾಡಿಕೊಂಡಿದ್ದವರು. ಹೀಗಾಗಿ ಅವರಿಗೆ ಗೋಕಾಕ ಮತಕ್ಷೇತ್ರ ಹೊಸದೇನು ಅಲ್ಲ. ಕಳೆದ ವಿಧಾನಸಭಾ ಉಪಚುನಾವಣೆ ಸಂದರ್ಭದಲ್ಲಿ ಕಳೆದುಕೊಂಡಿರುವ ಗೋಕಾಕ ಮತಕ್ಷೇತ್ರವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ರಣತಂತ್ರ ಹೆಣದಿದೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೆರೆಮರೆಯಲ್ಲಿ ಗೋಕಾಕಕ್ಕೆ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಯಾವೆಲ್ಲ ಅಂಶಗಳು ಪೂರಕವಾಗಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ತಮ್ಮ ಬೆಂಬಲಿಗರೇ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನೇ ಕೊನೆಯ ಕ್ಷಣದಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ಕಣಕ್ಕಿಳಿಯಲು ಸೂಚಿಸಿದರೆ ಅಚ್ಚರಿಪಡಬೇಕಾಗಿಲ್ಲ. ಆದ್ದರಿಂದ ಗೋಕಾಕ ವಿಧಾನಸಭಾ ಮತಕ್ಷೇತ್ರ ಈ ಬಾರಿ ರಾಜ್ಯದ ಗಮನ ಸೆಳೆಯುವುದರಲ್ಲಿ ಸಂದೇಹವಿಲ್ಲ.
ತೆರೆಮರೆ ಚಟುವಟಿಕೆ :
ಇಷ್ಟೆಲ್ಲ ರಾಜಕಾರಣ ಸೃಷ್ಟಿಯಾಗಲು ಇತ್ತೀಚಿಗೆ ಪಂಚಮಸಾಲಿ ಸಮಾಜದ ನಾಯಕ ಗಿಡ್ಡನವರ ಸೇರಿದಂತೆ ಹಲವರು ಪಂಚಮಸಾಲಿ ಸಮಾಜದ ಶ್ರೀಗಳಾದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಗಳನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ ನಂತರ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗೋಕಾಕ ಸ್ಪರ್ಧೆ ಮುನ್ನಲೆಗೆ ಬಂದಿದೆ. ಈಗ ನಡೆದಿರುವ ಚರ್ಚೆ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಬರಲಿದೆ ಎನ್ನುವುದು ಕಾದು ನೋಡಬೇಕು.