ಮೇದಿನಿನಗರ (ಜಾರ್ಖಂಡ್): ಜಾರ್ಖಂಡದ ಪಲಮು ಜಿಲ್ಲೆಯಿಂದ ಕದ್ದು 27 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿತ್ತು ಎನ್ನಲಾದ ಹೆಣ್ಣು ಆನೆಯನ್ನು ಬಿಹಾರದ ಚಪ್ರಾ ಜಿಲ್ಲೆಯಲ್ಲಿ ಪತ್ತೆಹಚ್ಚಿ ರಕ್ಷಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರ ನಿವಾಸಿ ನರೇಂದ್ರಕುಮಾರ ಶುಕ್ಲಾ ಅವರು ಸೆಪ್ಟೆಂಬರ್ 12 ರಂದು ಜಾರ್ಖಂಡ್ನ ಪಲಮು ಜಿಲ್ಲೆಯ ಚುಕುರ್ ಪ್ರದೇಶದಿಂದ ‘ಜಯಮತಿ’ ಎಂಬ ಹೆಣ್ಣು ಆನೆಯನ್ನು ಕಳ್ಳತನ ಮಾಡಲಾಗಿದೆ ಎಂದು ಪೊಲೀಸ್ ದೂರು ದಾಖಲಿಸಿದ್ದರು. ತನ್ನ ಆನೆ ತನ್ನ ಮಾವುತನ ಜೊತೆ ಕಾಣೆಯಾಗಿದೆ. ತಾನು ಮತ್ತು ಮೂವರು ಪಾಲುದಾರರು ಆನೆಯನ್ನು 40 ಲಕ್ಷ ರೂ.ಗೆ ಖರೀದಿಸಿದ್ದೆವು ಎಂದು ಶುಕ್ಲಾ ಹೇಳಿದ್ದಾರೆ. ಇತರರು ಮಾವುತನೊಂದಿಗೆ ಶಾಮೀಲಾಗಿ ತನಗೆ ತಿಳಿಯದೆ ಅದನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೇದಿನಿನಗರದ ಎಸ್ಡಿಪಿಒ ಮಣಿಭೂಷಣ್ ಪ್ರಸಾದ ಅವರು, “ಕಳ್ಳತನದ ಪ್ರಕರಣವನ್ನು ಸದರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಕಾಣೆಯಾದ ಆನೆ ಬಿಹಾರದ ಚಪ್ರಾದ ಪಹದಪುರದಲ್ಲಿದೆ ಎಂಬ ಸುಳಿವು ಸೋಮವಾರ ನಮಗೆ ಸಿಕ್ಕಿತು. ಸಹಾಯಕ್ಕಾಗಿ ನಾವು ಬಿಹಾರ ಪೊಲೀಸರಿಗೆ ವಿನಂತಿಸಿದ್ದೇವೆ. ತನಿಖೆಯ ಸಮಯದಲ್ಲಿ, ಅದು ಚಪ್ರಾದಲ್ಲಿ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ಅಪರಾಧಿಗಳನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಗೌಪ್ಯ ಮಾಹಿತಿ ಪಡೆದ ನಂತರ ಪೊಲೀಸರು ಆನೆಯನ್ನು ಪತ್ತೆಹಚ್ಚಿದರು ಮತ್ತು ಆನೆಯಲ್ಲಿ ಹುದುಗಿರುವ ಟ್ರ್ಯಾಕಿಂಗ್ ಚಿಪ್ ಅನ್ನು ಬಳಸಿಕೊಂಡು ಅದರ ಸ್ಥಳವನ್ನು ಖಚಿತಪಡಿಸಿಕೊಂಡರು. ಪಲಮು ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆಯ ಮೇರೆಗೆ, ತಂಡವು ಛಪ್ರಾ ತಲುಪಿ ಸ್ಥಳೀಯ ಅರಣ್ಯ ಅಧಿಕಾರಿಗಳ ಸಹಾಯದಿಂದ ಆನೆಯನ್ನು ಸುರಕ್ಷಿತವಾಗಿ ರಕ್ಷಿಸಿದೆ.
ಎಫ್ಐಆರ್ನಲ್ಲಿ ಅದರ ಅಂದಾಜು ಮೌಲ್ಯ ಸುಮಾರು 1 ಕೋಟಿ ರೂ.ಗಳಾಗಿದ್ದರೂ, ಆ ಪ್ರಾಣಿಯನ್ನು ಅಮ್ನೌರ್ನ ಗೋರಖ್ ಸಿಂಗ್ಗೆ 27 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಭಾರತೀಯ ನ್ಯಾಯ ಸಂಹಿತಾ, 2023 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಇದರಲ್ಲಿ ಶುಕ್ಲಾ ಅವರ ಪಾಲುದಾರರು ಮತ್ತು ಮಾವುತನ ಪಾತ್ರದ ಬಗ್ಗೆ ತನಿಖೆ ಮುಂದುವರೆದಿದೆ.