ಬೆಳಗಾವಿ :
ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 381 ರ (ಟಿಳಕವಾಡಿ ಗೇಟ್ ಸಂಖ್ಯೆ 3) ರಸ್ತೆ ಮೇಲ್ ಸೇತುವೆ ನಿರ್ಮಾಣದಿಂದ ಸ್ಥಳೀಯ ಹಾಗೂ ಬೃಹತ್ ವಾಹನಗಳ ಸುಗಮ ಸಂಚಾರಕ್ಕೆ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಅನುಕೂಲವಾಗಲಿದೆ. ರೈಲ್ವೆ ಹಳಿಗಳ ಬಳಿ ವಾಹನ ಪ್ರವೇಶ ಕಡಿಮೆಯಾಗಲಿವೆ. ಇದರಿಂದ ಅಪಘಾತ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ ಎಂದು ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.
ನಗರದ ಟಿಳಕವಾಡಿ 3 ನೇ ರೈಲ್ವೆ ಗೇಟ್ ಬಳಿಯಲ್ಲಿ ಬುಧವಾರ ನಡೆದ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 381ಕ್ಕೆ (ತಿಳಕವಾಡಿ ಗೇಟ್ ಸಂಖ್ಯೆ 3) ಬದಲಾಗಿ ನಿರ್ಮಿಸಲಾಗಿರುವ ರಸ್ತೆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈಲ್ವೆ ಗೇಟ್ ಮೇಲ್ಸೇತುವೆ ಮಾಜಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ದಿ.ಸುರೇಶ ಅಂಗಡಿ ಅವರ ಕನಸಾಗಿತ್ತು. ಅವರ ಪರಿಶ್ರಮದ ಭಾಗವಾಗಿ ಈಗ ಸೇತುವೆ ನಿರ್ಮಾಣ ಮಾಡಲಾಯಿತು. ಬೆಳಗಾವಿಯ ಎಲ್ಲಾ ರೈಲ್ವೆ ಗೇಟ್ ಮೇಲ್ಸೇತುವೆಗಳ ನಿರ್ಮಾಣಕ್ಕೆ ದಿ. ಸುರೇಶ ಅಂಗಡಿ ಅವರು ಕಾರಣ. ಬೆಳಗಾವಿ-ಧಾರವಾಡ ಹೊಸ ರೈಲ್ವೆ ಮಾರ್ಗ ಯೋಜನೆ ಕೂಡ ಅವರು ಹಾಕಿಕೊಟ್ಟ ಅಡಿಪಾಯ ಎಂದು ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.
ಶಾಲಾ ಮಕ್ಕಳು, ಕಚೇರಿ ಕೆಲಸಕ್ಕೆ ಹೋಗುವವರು, ಖಾನಾಪುರ, ಮಚ್ಚೆ, ಪೀರನವಾಡಿ ಸೇರಿದಂತೆ ಸ್ಥಳೀಯ ಭಾಗದ ವಾಹನ ಸವಾರರಿಗೆ ರೈಲ್ವೆ ಗೇಟ್ ಕ್ರಾಸ್ ಮಾಡಿ ಹೋಗಲು ತೊಂದರೆ ಇತ್ತು. ಈ ಸೇತುವೆ ನಿರ್ಮಾಣದಿಂದ ವಾಹನ ಸಂಚಾರರಿಗೆ ಹಾಗೂ ಸ್ಥಳೀಯರಿಗೆ ಅನುಕೂಲವಾಯಿತು ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ತಿಳಿಸಿದರು.
ಟ್ರಾಫಿಕ್ ಸಮಸ್ಯೆ ನಿವಾರಣೆ:
ಈಗಾಗಲೇ ರೈಲ್ವೆ ಡಬಲ್ ರೈಲು ರಸ್ತೆಗಳಾಗಿವೆ. ನಗರದ ರೈಲ್ವೆ ಗೇಟ್ ಇರುವ ಎಲ್ಲಾ ಭಾಗಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು. ಇದರಿಂದ ಟ್ರಾಫಿಕ್ ಸಮಸ್ಯೆ ಸಹ ಕಡಿಮೆ ಆಗುವುದು ಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ನೈರುತ್ಯ ರೈಲ್ವೆ ವಲಯದಿಂದ ಲೆವೆಲ್ ಕ್ರಾಸಿಂಗ್ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಜಿ ಸಂಸದ ಸುರೇಶ ಅಂಗಡಿ ಅವರ ಕನಸಾಗಿತ್ತು. ಜನ ಸಂಚಾರಕ್ಕೆ ಅಡಚಣೆ ಆಗುತ್ತಿರುವ ಕಾರಣ ಸುಮಾರು 18 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ರೈಲ್ವೆ ಗೇಟ್ ಗಳಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗುವದು ಎಂದು ತಿಳಿಸಿದರು.
ಬೆಳಗಾವಿ ರೈಲ್ವೆ ನಿಲ್ದಾಣ ಶೀಘ್ರದಲ್ಲಿ ಲೋಕಾರ್ಪಣೆ:
2023 ರ ವೇಳೆಗೆ ಡಬಲ್ ಲೈನ್ ರೈಲ್ವೆ ಮಾರ್ಗ ನಿರ್ಮಾಣ ಮುಕ್ತಾಯ ಆಗಲಿದೆ. ಅದೇ ರೀತಿಯಲ್ಲಿ ವಿಮಾನ ನಿಲ್ದಾಣಕ್ಕೆ ಸಮನಾಗಿ ಬೆಳಗಾವಿಯ ರೈಲ್ವೆ ನಿಲ್ದಾಣ ಈಗಾಗಲೇ ನಿರ್ಮಾಣ ಮಾಡಲಾಗಿದೆ. ರೈಲ್ವೆ ಅಧಿಕಾರಿಗಳ ನೀಡಿದ ಮಾಹಿತಿಯ ಅನ್ವಯ ಶೀಘ್ರದಲ್ಲೇ ಬೆಳಗಾವಿ ರೈಲ್ವೆ ನಿಲ್ದಾಣ ಲೋಕಾರ್ಪಣೆಗೊಳಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ ಕಡಾಡಿ ತಿಳಿಸಿದರು.
ಸಂಸದೆ ಮಂಗಳಾ ಅಂಗಡಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ರೈಲ್ವೆ ಇಲಾಖೆಯ ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಲಾಫಲಕ ಅನಾವರಣ:
ವೇದಿಕೆ ಕಾರ್ಯಕ್ರಮದ ಬಳಿಕ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 381ರ ಬದಲಿಗೆ (ಟಿಳಕ ವಾಡಿ ಸಂಖ್ಯೆ 3) ರಸ್ತೆ ಮೇಲ್ಸೇತುವೆ ಶೀಲಾಫಲಕ ಅನಾವರಣ ಗೊಳಿಸಲಾಯಿತು. ಸಂಸದೆ ಮಂಗಳಾ ಅಂಗಡಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಮೇಲ್ಸೇತುವೆಗೆ ಚಾಲನೆ ನೀಡಿದರು. ಶಾಸಕ ಅಭಯ ಪಾಟೀಲ, ಅನಿಲ ಬೆನಕೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.