ಮಂಗಳೂರು: ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ಅವರ ಮೃತದೇಹ ಕೊನೆಗೂ ನದಿಯಲ್ಲಿ ಪತ್ತೆಯಾಗಿದೆ.
ರವಿವಾರ ಮುಂಜಾನೆ ಮೂರು ಗಂಟೆಗೆ ಸುಮಾರಿಗೆ ಮನೆಯಿಂದ ಹೋಗಿದ್ದ ಮುಮ್ತಾಜ್ ಅಲಿ ಅವರ ಕಾರು ಡ್ಯಾಮೇಜ್ ಆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮುಮ್ತಾಜ್ ಅಲಿ ಅವರು ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು. ರವಿವಾರ ಅವರ ಶೋಧ ಕಾರ್ಯವನ್ನು ರಕ್ಷಣಾ ತಂಡಗಳು ನಡೆಸಿದ್ದವು. ಆದರೆ, ಇಂದು ನದಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.
ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸಹಿತ ಆರು ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ. ಮಹಿಳೆ ಜತೆ ಅಲಿಯವರಿಗೆ ಅಕ್ರಮ ಸಂಬಂಧವಿತ್ತೆಂದು ಅಪಪ್ರಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಡಿ ಆರು ಜನರ ವಿರುದ್ದ ದೂರು ದಾಖಲು ಮಾಡಲಾಗಿದೆ.
ರೆಹಮತ್ ಎಂಬ ಮಹಿಳೆ ಮತ್ತು ಅಬ್ದುಲ್ ಸತ್ತಾರ್, ಶಫಿ, ಮುಸ್ತಾಫ, ಶೋಹೆಬ್, ಸೀರಜ್ ಆರೋಪಿಗಳು.