ಅತ್ತೆ – ಸೊಸೆ ನಡುವೆ ಅನ್ಯೋನ್ಯ ಸಂಬಂಧ ಇರುವುದು ಬಹಳ ವಿರಳ. ಹಲವರು ಅನ್ಯೋನ್ಯ ಇರುವಂತೆ ಸಮಾಜಕ್ಕೆ ತೋರಿಸಲು ಇನ್ನಿಲ್ಲದ ಕಷ್ಟಪಡುತ್ತಾರೆ. ಮನೆಯಿಂದ ಹೊರಗಡೆ ಮದುವೆ, ಪೂಜೆ ಎಂದಾಗ ಖುಷಿಯಿಂದ ಓಡಾಡುತ್ತಾರೆ. ಮನೆಯೊಳಗೆ ಮಾತ್ರ ಇಬ್ಬರೂ ಉತ್ತರ-ದಕ್ಷಿಣ. ಒಬ್ಬರನ್ನು ಕಂಡ್ರೆ ಇನ್ನೊಬ್ಬರಿಗಾಗಲ್ಲ. ಆದರೆ, ಅತ್ತೆ ಸಾಯಬೇಕು ಎಂದು ಸೊಸೆ ದೇವರಿಗೇ ಮೊರೆಹೋದ ಪ್ರಸಂಗ ನೀವೆಲ್ಲಿಯಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ!? ಇಲ್ಲೊಂದು ಅಂಥದ್ದೊಂದು ಪ್ರಕರಣ ನಡೆದಿದೆ.
ಹರಕೆ ಅನ್ನೋದು ಜನಪದ ಆಚರಣೆಗಳಲ್ಲೊಂದು. ಪ್ರಪಂಚಾದ್ಯಂತ ಹಿಂದಿನಿಂದಲೂ ದೇವತೆಗಳಿಗೆ ಅಥವಾ ತಮ್ಮ ಆರಾಧನಾ ದೈವ ಶಕ್ತಿಗಳಿಗೆ ಹರಕೆ ಅರ್ಪಿಸುವುದು ರೂಢಿಯಲ್ಲಿದೆ.
ಮನೆಯಲ್ಲಿ ಯಾರಿಗಾದರು ಕೇಡಾದರೆ, ಕಾಯಿಲೆಯಾದರೆ ಬಂದಿರುವ ಎಡರನ್ನೂ ರೋಗವನ್ನೂ ನಿವಾರಿಸಿದರೆ ಮನೆದೇವರಿಗೆ ಬಲಿಕೊಡುತ್ತೇನೆ, ಅಭಿಷೇಕ ಮಾಡಿಸುತ್ತೇನೆ, ತೀರ್ಥಯಾತ್ರೆ ಮಾಡುತ್ತೇನೆ ಎಂದು ಮೊದಲಾಗಿ ತಮ್ಮ ಶಕ್ತ್ಯನುಸಾರ ಮನೆಯ ಯಜಮಾನ ಇಲ್ಲವೆ ಯಜಮಾನಿ ರೋಗಿಯ ಪರವಾಗಿ ಹರಕೆ ಮಾಡಿಕೊಳ್ಳುತ್ತಾರೆ. ವಿರಳವಾಗಿ ತಮ್ಮ ಇಷ್ಟಹರಕೆ ಮಾಡಿಕೊಳ್ಳುವುದೂ ಉಂಟು. ಹರಕೆ ಕಟ್ಟಿಕೊಂಡ ವ್ಯಕ್ತಿ ಕಷ್ಟಗಳು ಬಯಲಾದಾಗ ತಾನು ಹರಕೆ ಹೊತ್ತ ದೇವರ ಹಬ್ಬದ ದಿನ ಹರಕೆ ತೀರಿಸುತ್ತಾನೆ.
ಆದರೆ, ಇದೊಂದು ವಿಚಿತ್ರ ಮತ್ತು ವಿಲಕ್ಷಣ ಹರಕೆ…! ಕೇಳುವಾಗಲೇ ಅಚ್ಚರಿಯಾಗುತ್ತದೆ. ಆದರೆ, ಸದ್ಯ ಇಂತಹದ್ದೊಂದು ಹರಕೆ ವೈರಲ್ ಆಗುತ್ತಿದೆ.
ತನ್ನ ಅತ್ತೆ ಸಾಯಬೇಕು ಎಂದು ಇಲ್ಲೊಬ್ಬ ಸೊಸೆ ಹರಕೆ ಹೊತ್ತಿದ್ದಾಳೆ. ೫೦ ರೂ. ಮೌಲ್ಯದ ನೋಟಿನಲ್ಲಿ ‘ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ’ ಎಂದು ಸೊಸೆಯೊಬ್ಬಳು ಬರೆದು ದೇವರ ಹುಂಡಿಗೆ ಹಾಕಿದ್ದಾಳೆ. ಆ ನೋಟು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಡೆದದ್ದು ಎಲ್ಲಿ ?
ಹೀಗಂತ 50 ರೂಪಾಯಿ ನೋಟಿನ ಮೇಲೆ ಬರೆದು ದೇವರ ಹುಂಡಿಗೆ ಕಾಣಿಕೆ ಹಾಕಿದ್ದಾಳೆ ಈ ಸೊಸೆ ಮಹಾಶಯಳು.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ಶ್ರೀ ಕ್ಷೇತ್ರ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ಸೊಸೆ ಹಾಕಿದ ಕಾಣಿಕೆಯ 50 ರೂ. ನ ಈ ನೋಟು ಸಿಕ್ಕಿದೆ.
ಬೇಡಿದ ವರ ಕೊಡುವ ಶ್ರೀಕ್ಷೇತ್ರ ದತ್ತಾತ್ರೇಯನ ಹುಂಡಿಯಲ್ಲಿ ಇಂಥ ವಿಕೃತ ಹರಕೆ ಹೊತ್ತು ಹಾಕಿದ ಕಾಣಿಕೆಯ ನೋಟು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕಳೆದ ಕೆಲ ದಿನಗಳ ಹಿಂದೆ ದೇವಲಗಾಣಗಾಪುರ ದತ್ತನಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಹುಂಡಿ ಎಣಿಕೆ ಕಾರ್ಯದಲ್ಲಿ 50 ರೂಪಾಯಿ ಮುಖ ಬೆಲೆಯ ಈ ನೋಟು ಪತ್ತೆಯಾಗಿತ್ತು. ಆ ನೋಟಿನ ಮೇಲೆ ಅತ್ತೆ ಬೇಗ ಸಾಯಲಿ ಎಂದು ಬರೆದು ಹರಕೆ ಹೊತ್ತಿದ್ದು ಇದೀಗ ವೈರಲ್ ಆಗಿದೆ.