ಬೆಂಗಳೂರು : ಸೈಬರ್ ಕಮಾಂಡ್ ಸೆಂಟರ್ ತನಿಖಾ ಘಟಕಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಆ ಮೂಲಕ ದೇಶದಲ್ಲಿಯೇ ಮೊತ್ತ ಮೊದಲ ಸೈಬರ್ ಕಮಾಂಡ್ ಸೆಂಟರ್ ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಕೃತ್ಯಗಳ ವಿರುದ್ಧ ಸೈಬರ್ ಕಮಾಂಡ್ ಸೆಂಟರ್ ತನಿಖಾ ಘಟಕವು ಕಾರ್ಯಾಚರಣೆ ನಡೆಸಲಿದ್ದು, ಸೈಬರ್ ಭದ್ರತೆ, ಸೈಬರ್ ಅಪರಾಧ, ರಾನ್ಸಮ್ವೇರ್, ಹಿಂಬಾಲಿಸುವುದು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಆನ್ಲೈನ್ ಅಪರಾಧಗಳು, ಸೆಕ್ಸ್ಟಾರ್ಷನ್, ಡಿಜಿಟಲ್ ಅರೆಸ್ಟ್ ಸೇರಿದಂತೆ ಸೈಬರ್ ವಂಚನೆಗಳು, ಡೀಪ್ಫೇಕ್ಗಳು, ಐಡೆಂಟಿಟಿ ತೆಫ್ಟ್, ಹ್ಯಾಕಿಂಗ್, ಡೇಟಾ ಉಲ್ಲಂಘನೆ, ತಪ್ಪು ಮಾಹಿತಿ ಇತ್ಯಾದಿಗಳ ವಿರುದ್ಧ ಸೈಬರ್ ಕಮಾಂಡ್ ಸೆಂಟರ್ ಕಾರ್ಯಾಚರಣೆ ನಡೆಸಲಿದೆ. ಈ ಮೊದಲು ಸೈಬರ್ ಕ್ರೈಂ ಮತ್ತು ನಾಕ್ರೊಟಿಕ್ಸ್ ವಿಭಾಗವು ಸೈಬರ್ ಅಪರಾಧ ಪ್ರಕರಣಗಳ ತನಿಖೆ ನಡೆಸುತ್ತಿತ್ತು.
ಈ ಸೈಬರ್ ಕಮಾಂಡ್ ಸೆಂಟರ್ ಅನ್ನು ಪೊಲೀಸ್ ಮಹಾನಿರ್ದೇಶಕರ ಶ್ರೇಣಿಯ ಐಪಿಎಸ್ ಅಧಿಕಾರಿ ಮುನ್ನಡೆಸಲಿದ್ದು, 1994 ಬ್ಯಾಚ್ನ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಆಂತರಿಕ ಭದ್ರತಾ ವಿಭಾಗ (ಐಎಸ್ಡಿ)ದ ಡಿಜಿಪಿ, ಪೊಲೀಸ್ ಕಂಪ್ಯೂಟರ್ ವಿಂಗ್ (ಪಿಸಿಡಬ್ಲ್ಯೂ) ಮತ್ತು ಸೈಬರ್ ಅಪರಾಧ ಮತ್ತು ಮಾದಕ ದ್ರವ್ಯ (ಸಿ & ಎನ್) ವಿಭಾಗ ಮುನ್ನಡೆಸುತ್ತಿರುವ ಪ್ರಣವ್ ಮೊಹಾಂತಿ ಅವರನ್ನು ಈ ಸೈಬರ್ ಕಮಾಂಡ್ನ ಡಿಜಿ ಆಗಿ ನೇಮಕ ಮಾಡಲಾಗಿದೆ.
ರಾಜ್ಯಾದ್ಯಂತ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಸ್ತಿತ್ವದಲ್ಲಿರುವ 43 ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಪೊಲೀಸ್ ಠಾಣೆಗಳನ್ನು ಇದು ಒಳಗೊಂಡಿರಲಿದೆ. ಇವುಗಳನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗಳಾಗಿ ಮರುನಾಮಕರಣ ಮಾಡಲಾಗುತ್ತದೆ. ಅಲ್ಲದೆ, ಇದಲ್ಲದೆ, ಡಿಜಿಪಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧ ಪೊಲೀಸ್ ಠಾಣೆಗಳು, ರಾಜ್ಯ ಮಟ್ಟದ ಅಧಿಕಾರ ವ್ಯಾಪ್ತಿಯೊಂದಿಗೆ ಸಿಐಡಿ, ಹಾಗೆಯೇ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಕಮಾಂಡ್ ಘಟಕವನ್ನು ಸಹ ಈ ಸೈಬರ್ ಕಮಾಂಡ್ ಸೆಂಟರ್ನ ವ್ಯಾಪ್ತಿಗೆ ತರಲಾಗುತ್ತದೆ.