ಬೆಳಗಾವಿ: ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಮಾನವೀಯ ಮೌಲ್ಯ,ಸಮಾನತೆ ಮುಂತಾದವುಗಳಿಗೆ ಸಮಾನ ಅವಕಾಶ ನೀಡಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ವರಾಲೆ ಹೇಳಿದರು.
ಬೆಳಗಾವಿಯ ಜೆಎನ್ಎಂಸಿ ಕೋಡ್ಕಣಿ ಸಭಾಂಗಣದಲ್ಲಿ ಶನಿವಾರ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವತಿಯಿಂದ ಏರ್ಪಡಿಸಲಾಗಿದ್ದ ಭಾರತದ ಸಂವಿಧಾನ @75 ಸಾಂವಿಧಾನಾತ್ಮಕತೆಯನ್ನು ಪುನರ್ ಅವಿಷ್ಕಾರ ಎಂಬ ವಿಷಯದ ಕುರಿತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರನ್ನು ನೆನಪಿಸಿಕೊಂಡ ಅವರು, ಸಂವಿಧಾನ ಕೇವಲ ದಾಖಲೆಯಲ್ಲ, ಆದರೆ ಅದು ಸಮಾಜದ ಮೂಲ ಮಂತ್ರ. ಸಂವಿಧಾನ ಸಾಮಾಜಿಕ ದಾಖಲೆಯಾಗಿದೆ. ಕಾನೂನು ಒಪ್ಪಂದವಲ್ಲ. ಮಹಿಳೆಯರು ಹೇಗೆ ದಮನ ಕೊಳ್ಳಗಾಗುತ್ತಿದ್ದಾರೆ ಮತ್ತು ಸಂವಿಧಾನ ಮಹಿಳೆಯರ ಹಕ್ಕುಗಳನ್ನು ಹೇಗೆ ರಕ್ಷಿಸುತ್ತದೆ ಎಂಬ ಬಗ್ಗೆ ಅವರು ವಿಸ್ತೃತವಾಗಿ ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅತ್ಯಾಚಾರಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದೆ. ಇದರಿಂದ ಮಹಿಳೆಯರ ಹಕ್ಕುಗಳು ಮತ್ತು ಘನತೆಯನ್ನು ರಕ್ಷಿಸುವಲ್ಲಿ ಸುಪ್ರೀಂ ಕೋರ್ಟಿನ ಪಾತ್ರ ಸಾಬೀತಾಗಿದೆ ಎಂದು ಹೇಳಿದರು.
ಭಾರತ ಸಂವಿಧಾನದ 21ನೇ ವಿಧಿ ಉಲ್ಲೇಖಿಸಿ, ಗೌಪ್ಯತೆ ಹಕ್ಕು, ಘನತೆಯಿಂದ ಬದುಕುವ ಹಕ್ಕು ಮುಂತಾದವುಗಳ ಬಗ್ಗೆ ವಿಭಿನ್ನ ಉದಾಹರಣೆಗಳನ್ನು ಉಲ್ಲೇಖಿಸಿ ಅದರ ವಿಕಸನ ಬಗ್ಗೆ ತಿಳಿಸಿದರು.
ಕೆಎಲ್ಇ ಸಂಸ್ಥೆ ನಿರ್ದೇಶಕ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ಇತರ ಕೌಶಲಗಳನ್ನು ಬೆಳೆಸುವಲ್ಲಿ ಈ ಸಮ್ಮೇಳನ ಅತ್ಯಂತ ಪೂರಕವಾಗಿದೆ ಎಂದರು.
ಸ್ನೇಹಾ ದೊಡ್ಡಮನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಜೆ.ಎಂ. ಮಲ್ಲಿಕಾರ್ಜುನ ಸ್ವಾಗತಿಸಿದರು. ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಜ್ಯೋತಿ ಹಿರೇಮಠ ಪರಿಚಯಿಸಿದರು. ಪ್ರಾಧ್ಯಾಪಕಿ ಮತ್ತು ಕಾರ್ಯಕ್ರಮದ ಸಂಯೋಜಕಿ ಡಾ. ಸುಪ್ರಿಯಾ ಸ್ವಾಮಿ ವಂದಿಸಿದರು. ಪ್ರೇರಣಾ ಹನುಮಶೇಟ್ ನಿರೂಪಿಸಿದರು. ಕೊಟ್ಟಾಯಂ ಅಂಬೇಡ್ಕರ್ ಚೇರ್, ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಡಾ.ವಿಕ್ರಮನ್ ನಾಯರ್, ಬೆಂಗಳೂರು ನಿಟ್ಟೆ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಡಾ.ಸಂದೀಪ ಶಾಸ್ತ್ರಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪಿಜಿ ಕಾನೂನು ಅಧ್ಯಯನ ವಿಭಾಗದ ಮಾಜಿ ಕಾನೂನು ಪ್ರಾಧ್ಯಾಪಕ ಸಿ. ರಾಜಶೇಖರ್, ಬೆಂಗಳೂರು ಕೆಎಲ್ಇ ಕಾನೂನು ಕಾಲೇಜಿನ ಕೆ.ಆರ್. ಐತಾಳ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಪ್ರಬಂಧ ಮಂಡನೆ ಮಾಡಿದವರಿಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪಿಜಿ ಕಾನೂನು ಅಧ್ಯಯನ ವಿಭಾಗದ ಮಾಜಿ ಕಾನೂನು ಪ್ರಾಧ್ಯಾಪಕ ಸಿ.ರಾಜಶೇಖರ ಬಹುಮಾನ ಪ್ರದಾನ ಮಾಡಿದರು. ಬೆಲ್ಲದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಬಿ. ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.