ತಿರುವನಂತಪುರಂ : ನದಿ ದಡದಲ್ಲಿ ಬಿದ್ದಿದ್ದ ನಾಣ್ಯ ಮತ್ತು ನೋಟುಗಳ ಬಗ್ಗೆ ನಾಗರಿಕರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಮಾಡಿದ್ದೇನು ಗೊತ್ತೇ ?
ಕೇರಳದ ತಣ್ಣಿಮಡು ಚಿರೈಂಕೋಣತ್ ಬಸ್ ನಿಲ್ದಾಣಕ್ಕೆ ಹತ್ತಿರವಿರುವ ನದಿಯ ದಡದಲ್ಲಿ ನಾಣ್ಯಗಳು ಮತ್ತು ನೋಟುಗಳು ಪತ್ತೆಯಾಗಿವೆ. ಇದನ್ನು ನೋಡಿದ ಸ್ಥಳೀಯರು ನೆಡುಮಂಗಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ತೆಯಾಗಿರುವ ಹಣ ಕಳ್ಳತನವಾಗಿದೆಯೇ ಎಂಬ ಬಗ್ಗೆ ವೈಜ್ಞಾನಿಕ ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಈ ಭಾಗದ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿ ಪತ್ತೆಯಾಗಿರುವ ಹಣ ದೇವಸ್ಥಾನಗಳಿಂದ ಕದ್ದ ಹಣವಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಈ ಕಾರಣಕ್ಕೆ ಸ್ಥಳೀಯರು ಸೂಕ್ತ ತನಿಖೆ ಆಗ್ರಹಿಸಿದ್ದಾರೆ. ಆದರೆ, ನಾಣ್ಯಗಳು ಮತ್ತು ನೋಟುಗಳು ಪತ್ತೆಯಾದ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯ ನಿವಾಸಿಗಳು ಅಥವಾ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳದೆ ಮತ್ತು ಸ್ಥಳವನ್ನು ಮಹಜರು ಮಾಡದೇ, ಕೇವಲ ಪ್ಲಾಸ್ಟಿಕ್ ಕವರ್ಗಳಲ್ಲಿ ನಾಣ್ಯ ಮತ್ತು ನೋಟುಗಳನ್ನು ತುಂಬಿಕೊಂಡು ಹೋದರು. ಪೊಲೀಸರ ಈ ನಡೆಯನ್ನು ಕಂಡ ಜನರು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದ್ದಾರೆ. ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಆದರೆ, ಪೊಲೀಸರು ಈ ಪ್ರಕರಣದಲ್ಲಿ ಇನ್ನು ಯಾವುದೇ ತನಿಖೆ ಆರಂಭಿಸಿಲ್ಲ ಎಂದು ತಿಳಿದುಬಂದಿದೆ.