ಮೂಡಲಗಿ: ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರನ್ನೂ ಮೆಚ್ಚಿಸುವ ಭರದಲ್ಲಿ ಕಾಂಗ್ರೆಸ್ ಪಕ್ಷದ ಕರ ಪತ್ರದಂತೆ ರಾಜ್ಯದ ಬಜೆಟ್ನ ಪಾವಿತ್ರ್ಯತೆಯನ್ನು ಹಾಳುಗೆಡವಿ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿರುವ ನಿರಾಶದಾಯಕ ಬಜೆಟ್ ಮಂಡನೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ಫೆ-16ರಂದು ರಾಜ್ಯ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಎಲ್ಲ ಇಲಾಖೆಗಳಿಗೂ ಮೀಸಲಿಟ್ಟ ಅನುದಾನ ಗ್ಯಾರಂಟಿ ಯೋಜನೆಗಳಿಗೆ ವ್ಯೆಯವಾಗುತ್ತಿದ್ದು, ರಾಜ್ಯದ ಅಭಿವೃದ್ಧಿ ಗಗನ ಕುಸುಮವಾಗಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,000 ಕೋಟಿ ಅನುದಾನ ನೀಡಲಾಗಿದ್ದು ಅದರಲ್ಲಿ ಗೃಹಲಕ್ಷ್ಮಿ ಯೋಜನೆಗೆ 28,600 ಕೋಟಿ ಖರ್ಚಾಗುತ್ತದೆ. ನೌಕರರ ವೇತನಕ್ಕೆ 4500 ಕೋಟಿ ಖರ್ಚಾಗುತ್ತದೆ ಆಗ ಉಳಿಯುವುದು ಕೇವಲ 900 ಕೋಟಿ ರೂಪಾಯಿ ಮಾತ್ರ ಇದರಿಂದಾಗಿ ರಾಜ್ಯದ ಅಂಗನವಾಡಿಗಳ ಸ್ಥಿತಿ ಮತ್ತು ಈಗಾಗಲೇ ಘೋಷಣೆ ಮಾಡಿರುವ ಯೋಜನೆಗಳು ದಿಕೆಟ್ಟು ಹೋಗುತ್ತವೆ. ಇದೇ ರೀತಿ ಆರ್ಥಿಕ ಗಂಭಿರ ಸ್ಥಿತಿ ಎಲ್ಲಾ ಇಲಾಖೆಗಳಿಗೂ ಬಿಸಿ ತಟ್ಟಲಿದೆ ಎಂದರು.
ಅನುತ್ಪಾದಕ ವಲಯಗಳಿಗೆ ಖರ್ಚು ಮಾಡಿ ಉತ್ಪಾದನಾ ವಲಯಕ್ಕೆ ಬರಗಾಲ ಬಂದಂತಾಗಿದೆ. ಹೀಗಾಗಿ ಇದೊಂದು ನಿರಪಯುಕ್ತ, ನಿರಾಶದಾಯಕ, ಜನವಿರೋಧಿ ಬಜೆಟ್ ಆಗಿದ್ದು, ಬಜೆಟ್ನಲ್ಲಿ ಘೋಷಿಸಿರುವ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕನಿಷ್ಠ 10 ವರ್ಷಗಳ ಕಾಲ ಸಮಯಬೇಕಾಗುತ್ತದೆ. ಹೀಗಾಗಿ ಜನರ ನಂಬಿಕೆಯನ್ನು ಹುಸಿಗೊಳಿಸಿದ ನಿರಾಶೆಯದಾಯಕ ಬಜೆಟ್ ಎಂದು ಈರಣ್ಣ ಕಡಾಡಿ ಕಿಡಿಕಾಡಿದರು.
ಅಭಯ ಪಾಟೀಲ ಟೀಕೆ :
ರಾಜ್ಯ ಬಜೆಟ್ ಸುಳ್ಳಿನ ಕಂತೆ. ಇದೊಂದು ಮಂಗೇರಿ ಲಾಲ್ ಹಸಿನ್ ಸಪನೇ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರಕಾರ ಗೊತ್ತು ಗುರಿ ಇಲ್ಲದ ಬಜೆಟ್ ಮಂಡಿಸಿದೆ. ಕರ್ನಾಟಕದ ಅಭಿವೃದ್ಧಿ ಈ ಬಜೆಟ್ ನಿಂದ ಶೂನ್ಯ ಎಂದು ಕಾಣಿಸುತ್ತದೆ.