ಬೆಳಗಾವಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬದುಕು , ಆರ್ಥಿಕ ನೀತಿಗಳು ನಮ್ಮೆಗೆಲ್ಲ ಪ್ರೇರಣೆ. ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದ ಅವರು, 2013-18 ರವರೆಗೆ ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಬಣ್ಣಿಸಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿಗಳು, ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ ಮನಮೋಹನ್ ಸಿಂಗ್ ರವರು ಜಗತ್ತಿನ ಖ್ಯಾತ ಅರ್ಥಶಾಸ್ತ್ರಜ್ಞರಾಗಿ ಬೆಳೆದವರು. ಪಿ.ವಿ. ನರಸಿಂಹರಾವ್ ಅವರ ಸಂಪುಟದಲ್ಲಿ ಆರ್ಥಿಕ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಉದಾರೀಕರಣದ ಮೂಲಕ ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರ ಅಪಾರ ಜ್ಞಾನ ಹಾಗೂ ದೂರದೃಷ್ಟಿಯ ಯೋಜನೆಗಳು, ಭಾರತವು ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಕಾರಣವಾಯಿತು ಎಂದರು.
2004 ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಿ, ಸೋನಿಯಾ ಗಾಂಧಿಯವರು ಪ್ರಧಾನಿಯಾಗಲು ನಿರಾಕರಿಸಿದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆಮಾಡಲಾಗುತ್ತದೆ. ಹತ್ತು ವರ್ಷಗಳ ಕಾಲ ಪ್ರಧಾನಿ ಮಂತ್ರಿಯಾಗಿ ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಮನಮೋಹನ್ ಸಿಂಗ್ ಅವರು ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೊಳಿಸಿದರು. ದೇಶ ಕಂಡ ಪ್ರಾಮಾಣಿಕ ಪ್ರಧಾನಮಂತ್ರಿಗಳಲ್ಲಿ ಒಬ್ಬರು. ರಾಜಕಾರಣದಲ್ಲಿ ಪ್ರಾಮಾಣಿಕತೆ ಕಾಣಸಿಗುವುದು ವಿರಳ. ಆದರೆ ತಮ್ಮ ಅಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿ, ದೇಶದ ಆರ್ಥಿಕತೆಯಲ್ಲಿ ತಮ್ಮ ಹೆಜ್ಜೆಗುರುತನ್ನು ಬಿಟ್ಟುಹೋಗಿದ್ದಾರೆ ಎಂದರು.
ಅವರ ಬದುಕು , ಆರ್ಥಿಕ ನೀತಿಗಳು ನಮ್ಮೆಗೆಲ್ಲ ಪ್ರೇರಣೆ ಹಾಗೂ ಸ್ಪೂರ್ತಿ ನೀಡುತ್ತಿದೆ. ದೀರ್ಘಾವಧಿಯವರೆಗೆ ಅಧಿಕಾರದಲ್ಲಿದ್ದರೂ ಅತ್ಯಂತ ಸರಳ, ವಿನಯವಂತರಾಗಿದ್ದ ಶ್ರೀಯುತರು ದೇಶದ ಗೌರವಯುತ ವ್ಯಕ್ತಿಯಾಗಿದ್ದರು. ಇಂದು ಅವರು ನಮ್ಮನ್ನು ಅಗಲಿದ್ದು, ಭಾರತಕ್ಕೆ ಆದ ದೊಡ್ಡ ನಷ್ಟ. ಅವರ ಸಾವಿನ ದು:ಖವನ್ನು ಭರಿಸುವ ಶಕ್ತಿಯನ್ನು ಕುಟುಂಬ ವರ್ಗದವರಿಗೆ, ಅಭಿಮಾನಿ ಬಳಗ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಮನಮೋಹನ್ ಸಿಂಗ್ ದೇಶದಲ್ಲಿ ಮೊದಲ ಬಾರಿಗೆ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತಂದವರು. ದೇಶದ ಬಡತನವಿದ್ದಿದ್ದರಿಂದ, ಕಡಿಮೆ ದರದಲ್ಲಿ ಆಹಾರ ಲಭಿಸುವಂತಾಗಬೇಕೆಂಬ ಸದುದ್ದೇಶದಿಂದ ಈ ಕಾನೂನನ್ನು ಜಾರಿಗೆ ತರಲಾಯಿತು. ನಂತರ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಒಂದು ರೂ. ದರದಲ್ಲಿ ಒಂದು ಕೆಜಿ ಅಕ್ಕಿ ನೀಡುವ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಯಿತು. ನಂತರದ ದಿನಗಳಲ್ಲಿ ಐದು ಕೆಜಿ ಯಿಂದ ಏಳು ಕೆಜಿಯವರೆಗೆ ಹೆಚ್ಚಿಸಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ಇಂದು ನರೇಂದ್ರ ಮೋದಿಯವರು ನೀಡುತ್ತಿರುವ ಐದು ಕೆಜಿ ಆಹಾರಧಾನ್ಯ ಹಂಚಿಕೆಯ ಯೋಜನೆ ಪ್ರಾರಂಭವಾದದ್ದು ಮನಮೋಹನ್ ಸಿಂಗ್ ಅವರ ದೂರದೃಷ್ಟಿಯಿಂದ. ದೇಶದ ಬಡವರು, ನಿರುದ್ಯೋಗಿಗಳ ಕಷ್ಟನಿವಾರಣೆಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದರು.
ಮನಮೋಹನ್ ಸಿಂಗ್ ರವರೊಂದಿಗಿನ ಮುಖ್ಯಮಂತ್ರಿಗಳ ಒಡನಾಟದ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಪ್ರಧಾನಿಯಾಗಿದ್ದಾಗ ಭೇಟಿ ಮಾಡಿದ್ದೂ, ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಆಗಮಿಸಿ, ರಾಜ್ಯದ ಆರ್ಥಿಕತೆಯ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಿದ್ದರು ಎಂದರು.
ಮನಮೋಹನಸಿಂಗ್ ಅವರು ವಿಶ್ವಶ್ರೇಷ್ಠ ಆರ್ಥಿಕ ತಜ್ಞರಾಗಿ, ದೇಶದ ಮಧ್ಯಮ ಮತ್ತು ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದ ತಜ್ಞರಾಗಿದ್ದರು: ಸಿ.ಎಂ.ಸಿದ್ದರಾಮಯ್ಯ
ಸೋನಿಯಾಗಾಂಧಿ ಅವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಆ ಹುದ್ದೆಗೆ ಮನಮೋಹನ್ ಸಿಂಗ್ ಅವರನ್ನು ಆರಿಸಿದರು. ಹತ್ತು ವರ್ಷಗಳ ಕಾಲ ದೇಶವನ್ನು ಅತ್ಯಂತ ಸದೃಢವಾಗಿ ಮುನ್ನಡೆಸಿದರು: ಸಿ.ಎಂ:
ಮನಮೋಹನಸಿಂಗ್ ಅವರು ವಿಶ್ವಶ್ರೇಷ್ಠ ಆರ್ಥಿಕ ತಜ್ಞಾರಾಗಿ, ದೇಶದ ಮಧ್ಯಮ ಮತ್ತು ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದ ತಜ್ಞರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಸಿಪಿಇಡಿ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅವರ ಸಂತಾಪ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಸಿಎಂ ಮಾತುಗಳ ಹೈಲೈಟ್ಸ್…
ಮನಮೋಹನ್ ಸಿಂಗ್ ಅವರ ಬದುಕಿನ ಮಾರ್ಪಾಡು ನೋಡಿದಾಗ ಆಶ್ಚರ್ಯ ಆಗತ್ತೆ. ಅತ್ಯಂತ ಕಡುಬಡತನದ ಕುಟುಂಬದಲ್ಲಿ ಜನಿಸಿ, ದೇಶ ಕಂಡ ವಿಶ್ವಶ್ರೇಷ್ಢ ಆರ್ಥಿಕ ತಜ್ಞರಾಗಿ ಎರಡು ಬಾರಿ ದೇಶದ ಪ್ರಧಾನಿಯಾದರು.
ಇವರಿಗಿಂತ ದೊಡ್ಡ ಆರ್ಥಿಕ ತಜ್ಞರು ಇರಬಹುದು. ಆದರೆ, ಬಹಳ ಮೃದು ಸ್ವಭಾವದ, ಮಿತ ಭಾಷಿಯಾಗಿ ಮಧ್ಯಮ ಮತ್ತು ಬಡ ಜನರ ದೃಷ್ಟಿಯಿಂದ ಈ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದವರು.
ನಾನು ಹಲವು ಬಾರಿ ಇವರನ್ನು ಭೇಟಿಯಾಗಿದ್ದೆ. ಸಂಯಮದಿಂದ ನಮ್ಮ ಮಾತನ್ನು ಕೇಳಿಸಿಕೊಂಡು ಬಳಿಕ ಪ್ರಾಮಾಣಿಕ ಅಭಿಪ್ರಾಯ ನೀಡುತ್ತಿದ್ದರು.
ತಾವು ಅಲಂಕರಿಸಿದ ಎಲ್ಲಾ ಹುದ್ದೆಗಳಿಗೂ ನ್ಯಾಯ ಒದಗಿಸಿದರು. RBI ಗವರ್ನರ್ ಆಗಿ, ಆರ್ಥಿಕ ಸಚಿವರಾಗಿ, ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಎಲ್ಲಾ ಹುದ್ದೆಗಳಿಗೂ ಪ್ರಾಮಾಣಿಕ ನ್ಯಾಯ ಒದಗಿಸಿದರು.
ಸೋನಿಯಾಗಾಂಧಿ ಅವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಆ ಹುದ್ದೆಗೆ ಮನಮೋಹನ್ ಸಿಂಗ್ ಅವರನ್ನು ಆರಿಸಿದರು. ಹತ್ತು ವರ್ಷಗಳ ಕಾಲ ದೇಶವನ್ನು ಅತ್ಯಂತ ಸದೃಡವಾಗಿ ಮುನ್ನಡೆಸಿದರು.
ಭಾರತ ಆರ್ಥಿಕ ಸಂಕಷ್ಟದಲ್ಲಿದ್ದಾಗ ಉದಾರೀಕರಣ ಜಾರಿ ಮಾಡಿ ದೇಶವನ್ನು ಆರ್ಥಿಕವಾಗಿ ಮೇಲೆತ್ತಿದರು.
ಮನಮೋಹನ್ ಸಿಂಗ್ ಅವರಿಗಿಂತ ಮೊದಲು ದೇಶದ ಆರ್ಥಿಕತೆಯನ್ನು ವಿಶ್ವ ಆರ್ಥಿಕತೆ ಜೊತೆಗೆ ಮುಕ್ತ ಮಾಡಿರಲಿಲ್ಲ. ಇವರು ಮುಕ್ತಗೊಳಿಸುವ ಮೂಲಕ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ತುಂಬಿದರು.
ನಮ್ಮ ಸಂವಿಧಾನದ ಮೂಲಭೂತ ಆಶಯಗಳನ್ನು ಅಕ್ಷರಶಃ ಜಾರಿ ಮಡಿದರು.
ಆಹಾರ ಭದ್ರತೆ, ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ ಸೇರಿದಂತೆ ಹಲವು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಿ ದೇಶದ ಬಡವರು, ಮಧ್ಯಮವರ್ಗದವರನ್ನು ಆರ್ಥಿಕವಾಗಿ ಮೇಲೆತ್ತುವುದರಲ್ಲಿ ಯಶಸ್ವಿಯಾದರು.
ಮನಮೋಹನ್ ಸಿಂಗ್ ಅವರ ಅಗಲಿಕೆ ಇಡೀ ವಿಶ್ವ ಆರ್ಥಿಕತೆಗೆ ಆಗಿರುವ ನಷ್ಟ.
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಾವು ಆರಂಭಿಸಿದಾಗ ನಾವು ಮನಮೋಹನ್ ಸಿಂಗ್ ಅವರನ್ನು ಕರೆಸಿದ್ದೆವು. ಕರ್ನಾಟಕದ ಆರ್ಥಿಕತೆ ಬಗ್ಗೆ ಒಂದು ಕಾರ್ಯಕ್ರಮಕ್ಕೆ ನಾವು ಕರೆಸಿದ್ದೆವು. ಆಗ, ನಮ್ಮ ಅವಧಿಯಲ್ಲಿ ರಾಜ್ಯದ ಆರ್ಥಿಕತೆ ಅತ್ಯಂದ ಸದೃಡವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದರು. ಅವರ ಜ್ಞಾನ ಭಾರತದ ಅನೇಕ ಸಮಸ್ಯೆಗಳಿಗೆ ಪರಹಾರ ಕಂಡುಕೊಳ್ಳಲು ಸಾಧ್ಯವಾಯಿತು.
ದೇಶದ ಆರ್ಥಿಕ ಸಮಸ್ಯೆಗಳನ್ನು ನಿಖರವಾಗಿ ಗ್ರಹಿಸಿ, ಪರಿಹರಿಸುತ್ತಿದ್ದ ಅವರು ನಿಗರ್ವಿ ಆಗಿದ್ದರು. ಅತ್ಯಂತ ವಿನಯಶೀಲರಾಗಿದ್ದರು.
ನಾನು ಬದುಕಿರುವಾಗ ನನ್ನ ಕೆಲಸಗಳಿಗೆ ಹೆಚ್ಚು ಮಾನ್ಯ ಸಿಗದಿದ್ದರೂ ಮುಂದೆ ನಮ್ಮ ಕೆಲಸಗಳಿಗೆ ಹೆಚ್ಚು ಮಹತ್ವ ಸಿಗಲಿದೆ ಎಂದು ಮನಮೋಹನ್ ಸಿಂಗ್ ಅವರು ಅವತ್ತೇ ಹೇಳಿದ್ದರು.