ಬೆಳಗಾವಿ : ಬೆಳಗಾವಿಯ ರಾಮತೀರ್ಥ ನಗರ ಭಡಾವಣೆಗೆ 10- ದಿನಗಳ ನಂತರ ನೀರು ಸರಬರಾಜು ಮಾಡಲಾಗಿದೆ.
ಬೆಳಗಾವಿ ನಗರಕ್ಕೆ ಹಿಡಕಲ್ ಜಲಾಶಯದಿಂದ ನೀರು ಸರಬರಾಜು ಮಾಡಲಾಗುತ್ತಿದ್ದು ತುರ್ತು ರಿಪೇರಿ ಕಾರಣದಿಂದ ಕಳೆದ ಎರಡು ದಿನಗಳಿಂದ ನೀರು ಬಿಟ್ಟಿರಲಿಲ್ಲ ಎಲ್ ಅಂಡ್ ಟಿ ಕಂಪನಿ ಹೇಳಿಕೆ ನೀಡಿದೆ. ಆದರೆ ರಾಮತೀರ್ಥ ನಗರಕ್ಕೆ ಹತ್ತು ದಿನ ನೀರು ಸರಬರಾಜು ಮಾಡಿಲ್ಲ ಇದಕ್ಕೆ ಕಾರಣ ಕೂಡ ನೀಡಿಲ್ಲ.
ರಾಮತೀರ್ಥ ಬಡಾವಣೆಯಲ್ಲಿ ಮನೆ ಹೊಂದಿದವರು ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ, ನೀರಿನ ಬಿಲ್ ಬಾಕಿಯಿಟ್ಟುಕೊಳ್ಳದೆ ಪಾವತಿಸುತ್ತಿದ್ದರೂ ಎಲ್ಲ ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಗರದಲ್ಲಿದ್ದೂ ಹತ್ತು ದಿನಗಳಿಗೊಮ್ಮೆ ನೀರು ಪಡೆಯುತ್ತಿದ್ದಾರೆ.
ರಾಮತೀರ್ಥ ನಗರವನ್ನು ಪ್ರತಿನಿದಿಸುವ ಬಿಜೆಪಿಯ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ ಕೇವಲ ಎರಡು ದಿನ ಮಾತ್ರ ನೀರು ಸರಬರಾಜುಮಾಡುವಲ್ಲಿ ತೊಂದರೆಯಾಗಿತ್ತು, ಶುಕ್ರವಾರ ನೀರು ಬಿಡಲಾಗಿದೆ ಎಂದು ಹೇಳಿದ್ದಾರೆ. ಗುರುವಾರ ಈ ವಿಷಯವನ್ನು ಪಾಲಿಕೆಯ ಸಭೆಯಲ್ಲಿ ಪ್ರಸ್ತಾಪಿಸಿರುವದಾಗಿಯೂ ತಿಳಿಸಿದ್ದಾರೆ.
ನೀರು ಮಾತ್ರವಲ್ಲ ನೈರ್ಮಲ್ಯದ ವಿಷಯದಲ್ಲೂ ಪ್ರತಿಷ್ಠಿತ ಬಡಾವಣೆಯಾಗಿದ್ದ ರಾಮತೀರ್ಥ ನಗರ ಕೊಳಚೆ ಪ್ರದೇಶವಾಗಿದೆ. ಕಳೆದ ಜೂಲೈ 1ನೇ ದಿನಾಂಕದಿಂದ ಮನೆ ಮನೆಗಳಿಂದ ಕಸ ಸಂಗ್ರಹ ನಿಲ್ಲಿಸಲಾಗಿದೆ. ಹಾಗಾಗಿ ನಿವಾಸಿಗಳು ಮನೆಗಳಲ್ಲಿ ಕಸವಿಟ್ಟುಕೊಳ್ಳಲಾಗದೆ ಮೊದಲಿದ್ದ ತಿಪ್ಪೆ ಸ್ಥಳಗಳಲ್ಲಿ ಕಸ ಹಾಕುತ್ತಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬೀಡಾಡಿ ನಾಯಿ, ಸೊಳ್ಳೆಗಳ ತಾಣವಾಗಿ ಪರಿಣಮಿಸಿದೆ.
ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಸದಸ್ಯ ಕೊಂಗಾಲಿ “ಕಸ ಸಂಗ್ರಹ ಗುತ್ತಿಗೆ ಪಡೆದಿದ್ದ ಏಜನ್ಸಿಯ ಗುತ್ತಿಗೆ ಅವಧಿ ಜೂನ್ 30ಕ್ಕೆ ಕೊನೆಗೊಂಡಿದ್ದು ಹೊಸ ಏಜನ್ಸಿ ಗೆ ಗುತ್ತಿಗೆ ನೀಡಲಾಗಿದೆ. ಜೂಲೈ 1ರಿಂದಲೇ ಅವರು ಕೆಲಸ ಪ್ರಾರಂಭಿಸಬೇಕಿತ್ತು ಆದರೆ ಈ ವರೆಗೂ ಪ್ರಾರಂಭಿಸಿಲ್ಲ ಎಂದರು. ಆದರೆ ಸದ್ಯದ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಪಾಲಿಕೆ ಸದಸ್ಯ ಕೊಂಗಾಲಿ ಅವರೂ ಅಸಹಾಯಕರಾಗಿದ್ದಾರೆ. ಒಟ್ಟಿನಲ್ಲಿ ರಾಮತೀರ್ಥ ನಗರದ ನಿವಾಸಿಗಳು ಅಸಮರ್ಪಕ ನೀರು ಸರಬರಾಜು ಮತ್ತು ಸಾಂಕ್ರಾಮಿಕ ಸಂಕಷ್ಟ ಹೇಗೆ ನಿಭಾಯಿಸಬೇಕು ಎಂದು ಗೊಂದಲದಲ್ಲಿದ್ದಾರೆ.