ನಾಗಪುರ :
ಗಡಿ ವಿಷಯದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನಿಲ್ಲಿಸದಿದ್ದರೆ ಮಹಾರಾಷ್ಟ್ರ ಆ ರಾಜ್ಯಕ್ಕೆ ನೀರು ಪೂರೈಕೆ ಬಗ್ಗೆ ಮರುಚಿಂತನೆ ನಡೆಸಬೇಕಾಗುತ್ತದೆ ಎಂದು ಮಹಾರಾಷ್ಟ್ರದ ಸಚಿವ ಶಂಭುರಾಜೇ ದೇಸಾಯಿ ಎಚ್ಚರಿಕೆ ರವಾನಿಸಿದ್ದಾರೆ. ನಾಗಪುರದ ವಿಧಾನ ಭವನದ ಸಂಕೀರ್ಣದಲ್ಲಿ ಮಾತನಾಡಿದ ಅವರು, ಒಂದು ವೇಳೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರು-ಶಾಸಕರು ಗಡಿ ವಿಷಯದಲ್ಲಿ ಬೇಜವಾಬ್ದಾರಿತನದ ಹೇಳಿಕೆ ನೀಡುವುದನ್ನು ನಿಲ್ಲಿಸದಿದ್ದರೆ ಕರ್ನಾಟಕದ ಅಣೆಕಟ್ಟುಗಳಿಗೆ ನೀರು ಸರಬರಾಜು ಮಾಡುವ ಬಗ್ಗೆ ಇನ್ನು ಮುಂದೆ ಮರು ಚಿಂತನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.
ಮಹಾರಾಷ್ಟ್ರಕ್ಕೆ ಒಂದೇ ಒಂದು ಇಂಚು ಭೂಮಿಯನ್ನು ನೀಡುವುದಿಲ್ಲ ಎಂದು ಹೇಳಿರುವ ಬೊಮ್ಮಾಯಿ ವಿರುದ್ಧ ದೇಸಾಯಿ ಕಿಡಿಕಾರಿದ್ದಾರೆ. ಮಂಗಳವಾರ ಕರ್ನಾಟಕ ವಿಧಾನ ಮಂಡಲ ಅಧಿವೇಶನದಲ್ಲಿ ಬೊಮ್ಮಾಯಿ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಈಗಾಗಲೇ ಇತ್ಯರ್ಥವಾಗಿದೆ. ಕರ್ನಾಟಕ ತನ್ನ ಒಂದೇ ಒಂದು ಇಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದರು.
ಈ ಸಂಬಂಧ ಅಧಿವೇಶನದಲ್ಲಿ ನಡೆದ ಚರ್ಚೆ ವೇಳೆ ಬೊಮ್ಮಾಯಿ ಅವರು ಮಹಾರಾಷ್ಟ್ರದ ವಿರುದ್ಧ ನಿರ್ಣಯ ಅಂಗೀಕರಿಸುವುದಾಗಿ ಹೇಳಿದ್ದರು.
ಬೊಮ್ಮಾಯಿ ಹೇಳಿಕೆಗೆ ಶಂಭುರಾಜೇ ದೇಸಾಯಿ ಪ್ರತಿಕ್ರಿಯಿಸಿ, ಬೊಮ್ಮಾಯಿ ಸಂವಿಧಾನಿಕ ಹುದ್ದೆ ಅಲಂಕರಿಸಿದ್ದಾರೆ. ಅವರ ಹೇಳಿಕೆ ಮುಖ್ಯಮಂತ್ರಿ ಹುದ್ದೆಗೆ ತಕ್ಕದ್ದಲ್ಲ. ಕರ್ನಾಟಕದ ಮುಖ್ಯಮಂತ್ರಿಗಳು ಬೆದರಿಸುವ ಭಾಷೆಯನ್ನು ಬಳಸುವುದು ಸರಿಯಲ್ಲ. ಅವರು ಅದನ್ನು ನಿಲ್ಲಿಸಬೇಕು. ಮಹಾರಾಷ್ಟ್ರವು ಅದೇ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಬಹುದು. ಅವರು ನಮ್ಮನ್ನು ಪ್ರಚೋದಿಸಬಾರದು. ತಮ್ಮ ರಾಜ್ಯ ತಾಳ್ಮೆ ಪ್ರದರ್ಶಿಸುತ್ತಿದೆ. ಮಹಾರಾಷ್ಟ್ರದ ಕೊಯ್ನಾ ಮತ್ತು ಕೃಷ್ಣಾ ಜಲಾಶಯವನ್ನು ಕರ್ನಾಟಕ ಅವಲಂಬಿಸಿದೆ ಎನ್ನುವುದನ್ನು ಮರೆಯಬಾರದು. ಮಾರ್ಚ್, ಏಪ್ರಿಲ್ ನಲ್ಲಿ ಈ ಜಲಾಶಯದ ಮೇಲೆ ಕರ್ನಾಟಕ ಹೆಚ್ಚು ಅವಲಂಬಿತವಾಗಿದೆ. ಕರ್ನಾಟಕ ಇನ್ನು ಮುಂದೆ ಇಂತಹ ಹೇಳಿಕೆ ನಿಲ್ಲಿಸದಿದ್ದರೆ ಮಹಾರಾಷ್ಟ್ರ ಕರ್ನಾಟಕಕ್ಕೆ ನೀರು ಪೂರೈಸುವ ವಿಚಾರವಾಗಿ ಮರು ಚಿಂತನೆ ಮಾಡಬೇಕಾಗುತ್ತದೆ. ಮಹಾರಾಷ್ಟ್ರ ಸರ್ಕಾರ ಕರ್ನಾಟಕ ಅವಲಂಬಿತವಾಗಿರುವ ಜಲಾಶಯಗಳ ಎತ್ತರ ಹೆಚ್ಚಿಸಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿರುವ ಮರಾಠಿಗರ ಪರ ಮಹಾರಾಷ್ಟ್ರ ನಿಲ್ಲುತ್ತದೆ ಎಂದು ದೇಸಾಯಿ ಅಭಯ ನೀಡಿದರು.